ಮೈಸೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಗಲು ಕನಸು ಕಾಣುತ್ತಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ಆಡಳಿತಾವಧಿ ಪೂರೈಸಲಿದೆ ಎಂದು ರಾಜ್ಯ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ. ವೈ. ವಿಜಯೇಂದ್ರ ಅವರು ತಿರುಗೇಟು ನೀಡಿದ್ದಾರೆ.
ಬಿಜೆಪಿ ಸರ್ಕಾರ ಎಷ್ಟು ದಿನ ಇರುತ್ತೋ ಅನ್ನೋ ಹೆಚ್‌ಡಿಕೆ ಹೇಳಿಕೆಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಹಗಲುಗನಸು ಕಾಣ್ತಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಬಳಿಕ ಏನೇನೋ ಆಗುತ್ತೆ ಅಂದುಕೊಂಡಿದ್ದರು. ಆದ್ರೆ ಯಾವುದೇ ಸಮಸ್ಯೆ ಇಲ್ಲದೆ ಬಿಎಸ್‌ವೈ ಆಡಳಿತ ನಡೆಸುತ್ತಿದ್ದಾರೆ. ಹಗಲು ಕನಸು ಕಾಣುತ್ತ ಹೆಚ್‌ಡಿಕೆ ಮೂರು ವರ್ಷ ಕಳೆಯುತ್ತಾರೆ ಎಂದು ವ್ಯಂಗ್ಯವಾಡಿದರು.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಗೊಂದಲಗಳು ಇದ್ದವು. ಗೊಂದಲ ನಿವಾರಣೆ ಮಾಡಿದ ಯಡಿಯೂರಪ್ಪ ಎಲ್ಲವನ್ನು ನಿಭಾಯಿಸಿದ್ದಾರೆ. ಸದ್ಯ ಬಿಜೆಪಿಯಲ್ಲಿ ಯಾವುದೇ ಗೊಂದಲ್ಲ ಇಲ್ಲ. ಇನ್ನು 6 ಸಚಿವ ಸ್ಥಾನಗಳು ಖಾಲಿ ಇವೆ. ಅವನ್ನು ಶೀಘ್ರದಲ್ಲೇ ತುಂಬಿ ಮೈಸೂರು ಭಾಗಕ್ಕೆ ಅವಕಾಶ ನೀಡಲಾಗುತ್ತದೆ ಎಂದರು.
ಬಜೆಟ್ ಬಗ್ಗೆ ಯಾರು ತಲೆ ಕೆಡಿಸಿಕೊಂಡಿಲ್ಲ ಎಂಬ ಕಾಂಗ್ರೆಸ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಯಲ್ಲೇ ಗೊಂದಲ ಉಂಟಾಗಿದ್ದು, ಒಬ್ಬರ ಕಾಲನ್ನು ಇನ್ನೊಬ್ಬರು ಎಳೆಯುತ್ತಿದ್ದಾರೆ. ಅವರು ಬಜೆಟ್ ಬಗ್ಗೆ ಕೆಲಸ ಮಾಡ್ತಿಲ್ಲ ಅಂದ್ರೆ ಅಪಹಾಸ್ಯವಾಗುತ್ತೆ. ಯಡಿಯೂರಪ್ಪನವರು ಈಗಾಗಲೇ ಬಜೆಟ್ ಸಭೆ ನಡೆಸುತ್ತಿದ್ದಾರೆ. ರಾಜ್ಯಕ್ಕೆ ಉತ್ತಮ ಬಜೆಟ್ ಕೊಡ್ತಾರೆ ಎಂದರು.
ಅನರ್ಹ ಶಾಸಕರಾದ ಹೆಚ್. ವಿಶ್ವನಾಥ್ ಹಾಗೂ ಎಂಟಿಬಿ ನಾಗರಾಜ್ ಅಚರಿಗೆ ಸಿಎಂ ಯಡಿಯೂರಪ್ಪ ಕೊಟ್ಟ ಮಾತನ್ನು ಉಳಿಸಿಕೊಳ್ತಾರೆ. ಅವರು ಯಾರಿಗೂ ಕೊಟ್ಟ ಮಾತು ತಪ್ಲಿಲ್ಲ. ಇನ್ನೂ 6 ಸ್ಥಾನಗಳು ಬಾಕಿ ಇವೆ. ಅದರಲ್ಲಿ ಮೈಸೂರು ಭಾಗಕ್ಕೆ ಅವಕಾಶ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಎಂಟಿಬಿ ಹಾಗೂ ವಿಶ್ವನಾಥ್ ಅವರಿಗೆ ಅವಕಾಶ ಸಿಗಲಿದೆ ಎಂದು ಬಿ ವೈ ವಿಜಯೇಂದ್ರ ಹೇಳಿದ್ರು.