ಮೈಸೂರು: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ನಿವೃತ್ತರಾಗಿದ್ದಾರೆಯೇ ಹೊರತು, ಸಕ್ರಿಯ ರಾಜಕಾರಣದಿಂದಲ್ಲ. ಅವರು ಇಲ್ಲದ ಚುನಾವಣೆಯನ್ನು ಕರ್ನಾಟಕದಲ್ಲಿ ಊಹಿಸಲು ಸಾಧ್ಯವಿಲ್ಲ. ಮಗನಿಗೆ ಟಿಕೆಟ್ ನೀಡುವ ಬಗ್ಗೆ ಯಡಿಯೂರಪ್ಪ ನೀಡಿರುವ ಹೇಳಿಕೆ ತಪ್ಪಲ್ಲ. ಕರ್ನಾಟಕದಲ್ಲಿ ಯಾವ ಪಕ್ಷದಲ್ಲಿ ಕುಟುಂಬ ರಾಜಕಾರಣ ಇಲ್ಲ ಹೇಳಿ ಎಂದು ವಿಧಾನಪರಿಷತ್ ಬಿಜೆಪಿ ಸದಸ್ಯ ಹೆಚ್. ವಿಶ್ವನಾಥ್ ಪ್ರಶ್ನಿಸಿದ್ದಾರೆ.
ಇಂದು ತಮ್ಮ ಹುಟ್ಟುಹಬ್ಬಕ್ಕೆ ಸ್ನೇಹಿತರೊಬ್ಬರು ಉಡುಗೊರೆಯಾಗಿ ನೀಡಿದ ಆ್ಯಂಬುಲೆನ್ಸ್ನ್ನು, ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಕೊಡುಗೆಯಾಗಿ ಎಂ.ಎಲ್.ಸಿ ಹೆಚ್. ವಿಶ್ವನಾಥ್ ನೀಡಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಸೂರಿನ ಅಭಿವೃದ್ಧಿ ಬಗ್ಗೆ ಪ್ರತಿಯೊಬ್ಬರು ನಾನು-ನಾನು ಎಂದು ಕೊಚ್ಚಿಕೊಳ್ಳುತ್ತಿದ್ದಾರೆ. ಜನಕೊಟ್ಟ ತೆರಿಗೆಯಲ್ಲಿ ಅಭಿವೃದ್ಧಿ ಕೆಲಸವನ್ನು ನಾವು ಟ್ರಸ್ಟಿಗಳಾಗಿ ಮಾಡುತ್ತೇವೆ ಅಷ್ಟೇ. ಮೈಸೂರು ಪ್ರಗತಿಯ ಬಗ್ಗೆ ಮಹಾರಾಜರ ನಂತರ ಮೈಸೂರು ಪ್ರಗತಿ ನನ್ನಿಂದಲೇ ಎನ್ನುತ್ತಿದ್ದಾರೆ ಸಂಸದ ಪ್ರತಾಪ್ ಸಿಂಹ ಪಾಪ ಎಂದು ಟೀಕಿಸಿದರು.
ಕಾಂಗ್ರೆಸ್ ಪಕ್ಷ ಬೇಕಿಲ್ಲ: ಕಾಂಗ್ರೆಸ್ ಪಕ್ಷದ ನಾಯಕರಿಗೆ ಯಾರಿಗೂ ಕಾಂಗ್ರೆಸ್ ಬೇಕಿಲ್ಲ. ಕಾಂಗ್ರೆಸ್ ಉತ್ತಮ ಕೆಲಸ ಮಾಡಿದೆ, ಅದನ್ನು ಸ್ಮರಿಸುವವರು ಯಾರಿಲ್ಲ. ರಾಜ್ಯದಲ್ಲಿ ಇಂದಿರಾ ಗಾಂಧಿ ಮತ್ತು ದೇವರಾಜ ಅರಸುಗೆ ಇಂದಿಗೂ ಮನ್ನಣೆ ಇದೆ. ಆದರೆ ಅದರ ಸದುಪಯೋಗ ಕಾಂಗ್ರೆಸ್ನಿಂದ ಆಗುತ್ತಿಲ್ಲ. ಪ್ರತಿಯೊಬ್ಬರು ತಮ್ಮ ತಮ್ಮ ಹೆಸರುಗಳಲ್ಲಿ ಸಭೆ ನಡೆಸುತ್ತಿದ್ದಾರೆ ಎಂದರು.
ಇದನ್ನೂ ಓದಿ: ಕ್ಷೇತ್ರದ ಬಗ್ಗೆ ಅಲ್ಲ, ಕರ್ನಾಟಕದ ಬಗ್ಗೆ ಒಲವಿದೆ: ಬಿ.ವೈ. ವಿಜಯೇಂದ್ರ
ಇತ್ತೀಚೆಗೆ ಜಾತಿ ರಾಜಕಾರಣ ಜಾಸ್ತಿಯಾಗುತ್ತಿರುವ ಹಿನ್ನೆಲೆ ಜಾತಿ ರಾಜಕಾರಣ ಬೇಕು. ಆದರೆ ಎಲ್ಲಾ ಜಾತಿ, ಧರ್ಮ, ಸಮುದಾಯ, ಭಾಷೆ ಸೇರಿ ಚುನಾವಣೆ ನಡೆಯುವುದು. ಮತದಾರರು ಮತ ನೀಡಿದಾಗ ಅದಕ್ಕೊಂದು ರೂಪ ಬರುವುದು. ಆದ್ದರಿಂದ ಜಾತಿ ಹಿಡಿದು ಮತ ಕೇಳಬಾರದು. ಅಲ್ಲದೇ ಹಾಗೆ ರಾಜಕೀಯ ಸಹ ಮಾಡಬಾರದು. ಯಡಿಯೂರಪ್ಪ, ಬೊಮ್ಮಾಯಿ ಕಾಲದಲ್ಲಿ ನಡೆದಿರುವ ಉತ್ತಮ ಕಾರ್ಯಗಳು ಮತ್ತು ಪ್ರಗತಿಯ ಬಗ್ಗೆ ಜನರಿಗೆ ತಿಳಿಸುವ ಸಲುವಾಗಿ ಸಾಧನಾ ಸಮಾವೇಶ ಕಾರ್ಯಕ್ರಮ ಮಾಡುವುದು ಉತ್ತಮ ಎಂದು ಹೆಚ್ ವಿಶ್ವನಾಥ್ ಹೇಳಿದರು.