ಮೈಸೂರು: ರಂಗಾಯಣದ ನಿರ್ದೇಶಕರಿಗೆ ಅರ್ಜೆಂಟಾಗಿ ಎಂಎಲ್ಸಿ ಆಗಬೇಕು ಹಾಗೂ ಸಾಹಿತಿ ಎಸ್ಎಲ್ ಭೈರಪ್ಪಗೆ ಅರ್ಜೆಂಟಾಗಿ ಜ್ಞಾನಪೀಠ ಪ್ರಶಸ್ತಿ ಪಡೆಯಬೇಕು ಅದಕ್ಕಾಗಿ ರಂಗಾಯಣದಂತಹ ಸಾಂಸ್ಕೃತಿಕ ಸಂಸ್ಥೆಯಲ್ಲಿ ಟಿಪ್ಪು ವಿರೋಧಿ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ಎಂಎಲ್ಸಿ ಹೆಚ್.ವಿಶ್ವನಾಥ್ ಆಕ್ರೋಶ ವ್ಯಕ್ತ ಪಡಿಸಿದರು.
ಇಂದು ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಂಗಾಯಣ ಸಾಂಸ್ಕೃತಿಕ ಚಟುವಟಿಕೆಗಳ ತಾಣ, ಇಲ್ಲಿ ಕೋಮು ಸೌಹಾರ್ಧತೆ ಹಾಳು ಮಾಡುವ ಕೆಲಸವನ್ನ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಮಾಡುತ್ತಿದ್ದಾರೆ. ಆ ಮೂಲಕ ಬಿಜೆಪಿ ಪಕ್ಷ ಹಾಗೂ ಆರ್ಎಸ್ಎಸ್ ಅವರನ್ನ ಮೆಚ್ಚಿಸಿ ಬೇಗ ಎಂಎಲ್ಸಿ ಆಗುವ ಆತುರ ಅಡ್ಡಂಡ ಕಾರ್ಯಪ್ಪ ಅವರಿಗೆ ಇದೆ ಎಂದು ಆರೋಪಿಸಿದರು.
ಇನ್ನು ಜ್ಞಾನಪೀಠ ಪ್ರಶಸ್ತಿಯನ್ನು ಅರ್ಜೆಂಟಾಗಿ ಪಡೆಯಲು ಸಾಹಿತಿ ಎಸ್ಎಲ್ ಭೈರಪ್ಪ ಈ ಅಡ್ಡಂಡ ಕಾರ್ಯಪ್ಪನಿಗೆ ಸಹಾಯ ಮಾಡುತ್ತಿದ್ದಾರೆ. ಇದು ಸರಿಯಲ್ಲ ಕೂಡಲೇ ಮುಖ್ಯಮಂತ್ರಿಗಳು ರಂಗಾಯಣದ ನಿರ್ದೇಶಕರನ್ನ ತೆಗೆದುಹಾಕಬೇಕು ಎಂದು ಆಗ್ರಹಿಸಿದರು. ಅಲ್ಲದೇ ಶಾಲೆಗಳಿಗೆ ಕೇಸರಿ ಬಣ್ಣ ಹಾಕುತ್ತಿರುವುದು ಸರಿಯಲ್ಲ, ಒಂಬತ್ತು ವಿವಿಗಳನ್ನು ಹೊಸದಾಗಿ ಸ್ಥಾಪನೆ ಮಾಡುತ್ತಿರುವುದು ಸರಿಯಲ್ಲ.
ಜತೆಗೆ ವಿವಿಯ ಕುಲಪತಿ ನೇಮಕ ಮಾಡಲು ೫ ಕೋಟಿ ರೂ.ಗೂ ಹೆಚ್ಚು ಲಂಚದ ವ್ಯವಹಾರ ನಡೆಯುತ್ತಿದೆ. ಅದನ್ನು ತಡೆಯಲು ಆಗುತ್ತಿಲ್ಲ ಎಂದು ಆರೋಪಿಸಿದರು. ಅಲ್ಲದೇ ವಿಶ್ವವಿದ್ಯಾನಿಲಯದ ಕುಲಪತಿಗಳಿಗಿರುವ ನೇಮಕಾತಿ ಹಾಗೂ ಹೊಸ ಕಟ್ಟಡಗಳ ನಿರ್ಮಾಣದ ಅಧಿಕಾರ ತೆಗೆದುಹಾಕಬೇಕು ಎಂದು ಆಗ್ರಹಿಸಿದರು.
ಇನ್ನು ದೇಶದಲ್ಲಿ ವಾಣಿಜ್ಯ ಇಲಾಖೆಯಲ್ಲಿ ನಡೆಯುತ್ತಿರುವ ಮಾಮೂಲಿ ಲಂಚಾವತಾರ ನೋಡಿ ದೇಶದ ಜನತೆಗೆ ಗಾಬರಿಯಾಗಿದೆ. ಕೂಡಲೇ ಇದರ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದ ಅವರು ದೇಶದಲ್ಲಿ ಅದಾನಿ ಮತ್ತು ಅಂಬಾನಿ ಸರ್ಕಾರ ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಎರಡೂ ಕಡೆ ಗೆಲ್ಲುತ್ತಾರೆ: ಸಿದ್ದರಾಮಯ್ಯನವರು ಕೋಲಾರ ಅಥವಾ ವರುಣ ಕ್ಷೇತ್ರಗಳಲ್ಲಿ ಎಲ್ಲಿ ಸ್ಪರ್ಧೆ ಮಾಡಿದರೂ ಗೆಲ್ಲುತ್ತಾರೆ. ಅವರು ನಾಯಕರು ಎಂದ ವಿಶ್ವನಾಥ್ ಈಗಾಗಲೇ ಮೂರು ಪಕ್ಷಗಳು ನಾವು 130, 140, 150 ಸೀಟುಗಳನ್ನು ಗೆಲ್ಲುತ್ತೇವೆ ಎಂಬ ಹೇಳಿಕೆ ನೀಡುತ್ತಿರುವುದು ಮತದಾರರಿಗೆ ಮಾಡುತ್ತಿರುವ ಅವಮಾನ ಆಗಿದ್ದು, ನಿಮಗೆ ಎಷ್ಟು ಸೀಟು ಬೇಕು ಎಂಬುದನ್ನ ಜನ ನಿರ್ಧರಿಸುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ: ನಮಗೆ ಸಂಪೂರ್ಣ ವಿಶ್ವಾಸ ಇದೆ, ಕರ್ನಾಟಕದ ಯಾವುದೇ ಭಾಗ ಮಹಾರಾಷ್ಟ್ರಕ್ಕೆ ಹೋಗಲ್ಲ: ಸಿಎಂ ಬೊಮ್ಮಾಯಿ