ಮೈಸೂರು: ಕುರುಬರಿಗೆ ಸಿದ್ದರಾಮಯ್ಯ ನೋಡಿದರೆ ಇಂಗ್ಲಿಷ್ ಫಿಲಂ ನೋಡಿದ ಹಾಗೆ ಆಗುತ್ತದೆ. ಅದಕ್ಕೆ ಸಿದ್ದರಾಮಯ್ಯ ವೇದಿಕೆಗೆ ಬಂದಾಗೆಲ್ಲ ಶಿಳ್ಳೆ, ಚಪ್ಪಾಳೆ ಹೊಡಿತಾರೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ವ್ಯಂಗ್ಯವಾಡಿದರು.
ಇಂದು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಕುರುಬ ಸಮುದಾಯವನ್ನು ಹೈಜಾಕ್ ಮಾಡಿಕೊಂಡಿದ್ದಾರೆ. ಆದರೆ, ಸಮುದಾಯಕ್ಕಾಗಿ ಏನೂ ಮಾಡಿಲ್ಲ. ಕೆಲವೊಂದು ಸಮುದಾಯ ಭವನ, ಕಲ್ಯಾಣ ಮಂಟಪ ಮಾಡಿದ್ದಾರೆ ಅಷ್ಟೇ. ಸಮುದಾಯದ ಆರ್ಥಿಕವಾಗಿ ಮುಂದುವರಿಯೋದಕ್ಕೆ ನಿಮ್ಮ ಕೊಡುಗೆ ಏನು.? ಎಂದು ಸಿದ್ದರಾಮಯ್ಯ ಅವರನ್ನು ವಿಶ್ವನಾಥ್ ಪ್ರಶ್ನಿಸಿದರು.
ಕುರಿ ಮತ್ತು ಕಂಬಳಿ ವೃತ್ತಿಯ, ಸಮುದಾಯದ ಸ್ವತ್ತು, ಜಾತಿಯ ಸ್ವತ್ತಲ್ಲ:
ಹಾನಗಲ್ ಉಪ ಚುನಾವಣೆ ಮತ ಕೇಳುವಾಗ ಕುರುಬರು, ಕಂಬಳಿ ಸೇರಿದಂತೆ ಬೇಡವಾದ ವಿಚಾರ ಪ್ರಸ್ತಾಪವಾಗುತ್ತಿದ್ದು, ಬೇಡವಾದ ವಿಚಾರಗಳೇ ಜನರನ್ನು ಕೆಣಕ್ತಿರೋದು ಚುನಾವಣೆಗೆ, ರಾಜಕಾರಣಿಗಳಿಗೆ ಶೋಭೆ ತರುವಂತಹದ್ದಲ್ಲ. ಕಾಗಿನೆಲೆ ಪೀಠಕ್ಕೆ ಯಾರೇ ಹೋದರೂ ಕಂಬಳಿ ಹೊದಿಸಿ ಗೌರವ ತೋರುತ್ತಾರೆ. ಅದೇ ರೀತಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೂ ಹೊದಿಸಿದ್ದಾರೆ. ಇದಕ್ಕೆ ಯಾವುದೇ ವಿಶೇಷ ಅರ್ಥ ಕಲ್ಪಿಸುವುದಲ್ಲ.
ಅದನ್ನೇ ಸಿದ್ದರಾಮಯ್ಯ ಬಹಳ ದೊಡ್ಡ ಅಪರಾಧ ಎನ್ನುವಂತೆ, ಏಕ ವಚನದಲ್ಲಿ ಮಾತಾಡುತ್ತಿರೋದು ಯಾರಿಗೂ ಶೋಭೆ ತರವಂತಹದ್ದಲ್ಲ. ಜನ ಸಾಂಪ್ರದಾಯವಾಗಿ ಕಂಬಳಿ ಹೊದಿಸಿದ್ದನ್ನ ಪ್ರಶ್ನೆ ಮಾಡೋದು ಬಹಳ ಸಣ್ಣತನ ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.
ಸಿದ್ದರಾಮಯ್ಯ ನೀವೂ ಕೂಡ ಮುಖ್ಯಮಂತ್ರಿ ಆಗಿದ್ದವರು. ನಿಮಗೆ ಕುರುಬ ಜನಾಂಗ ಸೇರಿದಂತೆ ಎಲ್ಲ ಜನಾಂಗದವರು ಮತ ಹಾಕಿದ್ದಾರೆ. ಆದರೆ, ನೀವು ಹಾಗೆ ಮಾತನಾಡುತ್ತಿರೋದು ಸಮುದಾಯಕ್ಕೆ ಶೋಭೆ ತರುವಂತಹದ್ದಲ್ಲ. ಮುಖ್ಯಮಂತ್ರಿ, ಪ್ರಧಾನಿಗಳನ್ನು ಏಕವಚನದಲ್ಲಿ ಮಾತನಾಡೋದು ಸಭ್ಯ ಸಮಾಜದಲ್ಲಿ ಸಣ್ಣತನ ಎಂದ್ರು. ಪ್ರಪಂಚದಲ್ಲಿ ಕುರಿಯನ್ನು ಹೆಚ್ಚು ಸಾಕೋದು ಯುರೋಪ್, ಎರಡನೇಯದ್ದು ಭಾರತ.
ಯುರೋಪ್‌ನಲ್ಲಿ ಅದು ಬಹು ಮುಖ್ಯ ಉದ್ಯಮ. ಆದರೆ, ಭಾರತ ದೇಶದಲ್ಲಿ ಅದನ್ನು ಸಂಕುಚಿತ ಮಾಡಿ ಒಂದು ಜಾತಿಗೆ ಸೀಮಿತ ಮಾಡಲಾಗಿದೆ. ಸಿದ್ದರಾಮಯ್ಯ ಸಂಕುಚಿತ ಆದಂತೆ ಕುರುಬರು ಏಕಾಂಗಿಗಳಾಗುತ್ತಾರೆ. ಇದರ ಅಪಾಯ ಮನಗಂಡು ಎಚ್ಚರಿಕೆಯಿಂದ ಮಾತನಾಡಿ ಎಂದು ಹೆಚ್.ವಿಶ್ವನಾಥ್ ತಿಳಿಸಿದರು.
ಸಿದ್ದರಾಮಯ್ಯಗೆ ಕೃತಜ್ಞತೆ ಎಂಬುದೇ ಇಲ್ಲ:
ಈ ನಾಡಿನಲ್ಲಿ ಕೃತಜ್ಞತೆ ಇಲ್ಲದ ನಾಯಕ ಅಂದರೆ ಸಿದ್ದರಾಮಯ್ಯ. ಹೆಚ್. ಡಿ.ದೇವೇಗೌಡ ಅವರು ನಿಮ್ಮನ್ನು ಆಚೆಗೆ ಹಾಕಿದಾಗ ಎಸ್‌ಎಂ ಕೃಷ್ಣ, ಹೆಚ್.ಎಂ.ರೇವಣ್ಣ, ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ಗೆ ಕರೆತಂದರು. ನಂತರ ನೀವು ವಿರೋಧ ಪಕ್ಷದ ನಾಯಕ ಆದ್ರಿ, ನಂತರ ಮುಖ್ಯಮಂತ್ರಿ ಆದ್ರಿ ಎಂದ್ರು. ಸಿದ್ದರಾಮಯ್ಯ ಒಂಥರಾ ಇಂಗ್ಲಿಷ್ ನವರ ರೀತಿ. ನಿಮ್ಮನ್ನ ಒಳಗೆ ಕರೆತಂದರೆ, ನೀವು ನಮ್ಮನ್ನು ಹೊರ ಹಾಕಿದ್ರಿ.
ಎಸ್.ಎಂ.ಕೃಷ್ಣ ನಿಮ್ಮನ್ನ ಅನ್ ಪಾಲಿಷ್ಡ್ ಡೈಮಂಡ್ ಅಂದ್ರು. ಆದರೆ, ನೀವು ಅವರಿಗೂ ಏಕವಚನದಲ್ಲಿ ಮಾತನಾಡಿದ್ರಿ, ಸಿದ್ದರಾಮಯ್ಯಗೆ ಕೃತಜ್ಞತೆ ಎಂಬುದೇ ಗೊತ್ತಿಲ್ಲ. ಅಹಿಂದ ಎಂದು ಹೇಳುವ ಅಹಿಂದ ನಾಯಕನಾದ ನಾನು, ಚಿಮ್ಮನಕಟ್ಟಿ, ಎ.ಕೃಷ್ಣಪ್ಪ ಸೇರಿದಂತೆ ಅಲ್ಪ ಸಂಖ್ಯಾತ ನಾಯಕರನ್ನು ಮುಗಿಸಿದ್ದು ಸಿದ್ದರಾಮಯ್ಯ ಎಂದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ 36 ಸಾವಿರ ಮತದಲ್ಲಿ ಸೋತಿರಿ. ಆದರೆ, ಸೆಕೆಂಡ್ ಲೈನ್ ನಾಯಕರನ್ನು ಬೆಳೆಸಲಿಲ್ಲ. ನಾನು ನಾನು ಅಂತ ಮಾತಾಡ್ತಾರೆ. ನೀನು ಯಾವ ಸೀಮೆ ಅಹಿಂದ. ನನ್ನನ್ನೆ ಬಲಿಹಾಕಿದೆ. ಚಿಮ್ಮನಕಟ್ಟಿ ಸೀಟ್ ಕಿತ್ಕೊಂಡಿರಿ ಅಲ್ಪಸಂಖ್ಯಾತರನ್ನು ಮುಗಿಸುತ್ತಿದ್ದಿರಿ. ನಿಮ್ಮ ಮಾತು ಸಮಾಜವನ್ನು ಸಡಿಲಮಾಡುತ್ತಿದೆ. ನಾನೇ ಕಟ್ಟಿಬಿಟ್ಟೆ ಮಠ ಅಂತೀರಾ. ಕಾಗಿನೆಲೆ ಊರಿನ ಒಳಗೆ ಹೋಗಿಲ್ಲ. ಕನಕ ಪೀಠದ ಸ್ಥಾಪಕ ಅಧ್ಯಕ್ಷ ನಾನು ಎಂದ ಅವರು, ಕಾಗಿನೆಲೆಯಲ್ಲಿ 10 ಸಾವಿರ ಮನೆ ಇದೆ.
ಇದರಲ್ಲಿ ಒಂಬತ್ತೂವರೆ ಮುಸ್ಲಿಂ ಸಮುದಾಯ ಇದೆ. ಕನಕಗೋಪುರ ಕೆಡವಿದಾಗ ಎಲ್ಲಿದ್ರಿ? ಕುರುಬ ಸಮುದಾಯಕ್ಕೆ ನಿಮ್ಮ ಕೊಡುಗೆ ಏನು? ಕುರುಬ ಎಸ್.ಟಿ. ಹೋರಾಟಕ್ಕೆ ನಿಮ್ಮ ಬೆಂಬಲ ಇಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರಹಾಕಿದರು.
ಕುರುಬ ಕಲ್ಯಾಣ ಬಿಜೆಪಿಯಿಂದ ಮಾತ್ರ ಸಾಧ್ಯ:
ಹಾನಗಲ್-ಸಿಂದಗಿ ಬೈಎಲೆಕ್ಷನ್ ಮತದಾನ ವಿಚಾರವಾಗಿ ಮಾತನಾಡಿ, ಸಮುದಾಯ ಹಾಗೂ ದೇಶದ ಒಳಿತಿಗಾಗಿ ಬೊಮ್ಮಾಯಿ ನೇತೃತ್ವದ ಬಿಜೆಪಿಗೆ ಮತಹಾಕಿ. ಇನ್ನೂ ಒಂದೂವರೆ ವರ್ಷ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುತ್ತೆ. ಕುರುಬ ಕಲ್ಯಾಣ ಬಿಜೆಪಿಯಿಂದ ಮಾತ್ರ ಸಾಧ್ಯ. ಬಸವರಾಜ ಬೊಮ್ಮಾಯಿ ಕುರುಬರ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದ್ದಾರೆ. ಹಾಗಾಗಿ ಸಮುದಾಯದ ಅಭಿವೃದ್ಧಿಗಾಗಿ ಕುರುಬರು ಬಿಜೆಪಿ ಬೆಂಬಲಿಸಿ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದರು.