ಮೈಸೂರು : ಮಾಜಿ ಸಚಿವ ಹೆಚ್ ವಿಶ್ವನಾಥ್ ಅವರು 'ಬಾಂಬೆ ಡೇಸ್' ಎಂಬ ಪುಸ್ತಕ ಬರೆದಿಯುತ್ತಿದ್ದಾರೆ. ಈ ಕುರಿತಂತೆ ಸ್ವತಃ ಅವರೇ ಮಾಹಿತಿ ನೀಡಿದ್ದಾರೆ.
ಇಂದು ಪತ್ರಕರ್ತರ ಜೊತೆ ಮಾತನಾಡಿದ ಅವರು, ನಾನು ಬಾಂಬೆ ಡೇಸ್ ಪುಸ್ತಕವನ್ನು ಬರೆಯುತ್ತಿದ್ದೇನೆ. ಕರ್ನಾಟಕ ರಾಜ್ಯ ರಾಜಕಾರಣದ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ರಾಜೀನಾಮೆ ನೀಡಿ ಸರ್ಕಾರವನ್ನು ಕೆಡವಿದ್ದು, ಇತಿಹಾಸದಲ್ಲಿ ಅದು ಐತಿಹಾಸಿಕ ಘಟನೆಯಾಗಿದೆ. ನಮ್ಮನ್ನು ದುಡ್ಡಿಗೆ ಮಾರಿಕೊಂಡವರು ಎಂದೆಲ್ಲ ಪ್ರಚಾರಮಾಡಲಾಯಿತು. ಆದರೆ, ಯಾವ ಕಾರಣಕ್ಕಾಗಿ 17 ಜನ ಶಾಸಕರು ಜೆಡಿಎಸ್ ಮತ್ತು ಕಾಂಗ್ರೆಸ್‌ನಿಂದ ಹೊರಬಂದರು ಎಂಬ ಬಗ್ಗೆ ವಿಶ್ಲೇಷಿಸಲು ಎಲ್ಲೂ ಆಗಿಲ್ಲ. ಎಲ್ಲರ ಮೇಲೂ ಕಳಂಕ, ದೋಷ, ಆಪಾದನೆಗಳು ಬಂದಿವೆ. ಸತ್ಯ ಹೊರ ಬರಲಿಲ್ಲ. ಸತ್ಯವನ್ನು ಹೊರಕ್ಕೆ ಹಾಕುವುದಕ್ಕೆ ನಾನು ಬಾಂಬೆ ಡೇಸ್ ಬರೆಯುತ್ತಿದ್ದೇನೆ ಎಂದರು.
ಕರ್ನಾಟಕದ ಕಾಂಗ್ರೆಸ್ ಪಕ್ಷದಲ್ಲಿ ಡಿ ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿರುವುದನ್ನು ನಾನು ಅಭಿನಂದಿಸುತ್ತೇನೆ. ಇವರು ಕೆಳ ಹಂತದಿಂದ ನಾಯಕರಾಗಿ ಬೆಳೆದವರು. ಅವರು ಮುಖ್ಯಮಂತ್ರಿಯಾಗುವ ಸಾಲಿನಲ್ಲಿ ಇದ್ದಾರೆ ಎಂದರು. ಕರ್ನಾಟಕದಲ್ಲಿ ಸಿದ್ದರಾಮಯ್ಯ , ಖರ್ಗೆ ಅವರು ಪ್ರಧಾನಿ ವಿರುದ್ಧ ಏಕವಚನದಲ್ಲಿ ಮಾತನಾಡುವುದು ಸರಿಯಲ್ಲ ಎಂದು ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು.