ಮೈಸೂರು: ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧೆ ಮಾಡಿದರೆ ಸಂತೋಷ. ಅವರು ನಮ್ಮ ರಾಷ್ಟ್ರೀಯ ನಾಯಕರು. ಇಲ್ಲಿ ನಿಂತರೆ ಲಕ್ಷ ಮತಗಳ ಲೀಡ್ನಿಂದ ಗೆಲ್ಲಿಸುತ್ತೇನೆ ಎಂದು ಮೈಸೂರು ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ಖರ್ಗೆಯವರು ಬಯಸಿದರೆ ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು. ಆದರೆ ಸದ್ಯಕ್ಕೆ ಇವೆಲ್ಲಾ ಅಂತೆ ಕಂತೆಗಳಷ್ಟೇ. ಇನ್ನೂ ಪಕ್ಷದೊಳಗೇ ಚರ್ಚೆಯಾಗಿಲ್ಲ ಎಂದರು.
ದಶಪಥ ಹೆದ್ದಾರಿ ನಾನೇ ಮಾಡಿಸಿದ್ದು ಎಂದು ಸಂಸದ ಪ್ರತಾಪ್ ಸಿಂಹ ಬುರುಡೆ ಬಿಟ್ಟುಕೊಂಡು ತಿರುಗಾಡುತ್ತಿದ್ದಾರೆ. ಅವರೇನು ಹೆದ್ದಾರಿ ಮೇಸ್ತ್ರಿನಾ, ಅವರು ಸಿದ್ದರಾಮಯ್ಯನವರಿಗೆ ಸಮಾನ ನಾಯಕನಾ ಎಂದು ವಾಗ್ದಾಳಿ ನಡೆಸಿದರು.
ಬೆಂಗಳೂರು-ಮೈಸೂರು ನಡುವಿನ ಹೆದ್ದಾರಿ ಆರಂಭವಾದಾಗ ಪ್ರತಾಪ್ ಸಿಂಹ ಸಂಸದನೇ ಆಗಿರಲಿಲ್ಲ. ಘೋಷಣೆಯಾಗಿರುವ ಹೆದ್ದಾರಿಯನ್ನು ಮಾಡುವುದು ಸರ್ಕಾರದ ಕೆಲಸ. ಈ ಹೆದ್ದಾರಿ ಮಾಡಲು ಸಂಸದರಿಗೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಇಂಚಾರ್ಜ್ ಕೊಟ್ಟಿದ್ದಾರಾ?. ಸುಮ್ಮನೆ ಹೇಳಿಕೆ ನೀಡಿ ರಾಜಕೀಯ ಮೈಲೇಜ್ ಪಡೆಯಬಾರದು ಎಂದರು. ಇದೇ ವೇಳೆ, ಹೆದ್ದಾರಿಯಲ್ಲಿ ಮಳೆ ನೀರು ತುಂಬಿಕೊಂಡಾಗ ಎಲ್ಲಿ ಹೋಗಿದ್ದರು ಎಂದು ಕೇಳಿದರು.
ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್: ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ ಎಂದು ಸಚಿವರು ಹೇಳಿದರು. ಬೆಂಗಳೂರಿನಲ್ಲಿ ಕನ್ನಡ ಪರ ಸಂಘಟನೆಗಳ ಪ್ರತಿಭಟನಕಾರರ ಮೇಲೆ ಎಫ್ಐಆರ್ ಹಾಕುತ್ತಿರುವುದರ ಕುರಿತ ಪ್ರಶ್ನೆಗೆ, ಅವರು ತಪ್ಪು ಮಾಡಿದ್ದರೆ ಪೊಲೀಸರು ಪರಿಶೀಲಿಸಿ, ಕಾನೂನು ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂದರು.
ಇದನ್ನೂಓದಿ: ಯತ್ನಾಳ್ ವಿರುದ್ಧ ಕ್ರಮದ ಬದಲು ಮನವೊಲಿಕೆಗೆ ಬಿಜೆಪಿ ನಾಯಕರ ನಿರ್ಧಾರ: ಅಶ್ವತ್ಥನಾರಾಯಣ್