ಮೈಸೂರು: ಮೈಸೂರು - ನಂಜನಗೂಡು ರಸ್ತೆಯಲ್ಲಿರುವ ಜೆಎಸ್ಎಸ್ ಬಸ್ ತಂಗುದಾಣದ ಶೆಲ್ಟರ್ ಮೇಲೆ ಅಳವಡಿಸಿರುವ ಗುಂಬಜ್ ಮಾದರಿಯ ಎರಡು ಗೋಪುರಗಳನ್ನು ತೆರವುಗೊಳಿಸಿದ್ದು, ಸದ್ಯಕ್ಕೆ ವಿವಾದ ಅಂತ್ಯಗೊಂಡಿದೆ. ಆದರೆ, ಕೆ ಆರ್ ಕ್ಷೇತ್ರ ವ್ಯಾಪ್ತಿಯಲ್ಲಿರುವ ಇನ್ನೂ 10 ಬಸ್ ತಂಗುದಾಣಗಳ ಮೇಲೂ ಚಿಕ್ಕ ಗುಂಬಜ್ಗಳಿವೆ.
ಕೆ ಆರ್ ಕ್ಷೇತ್ರಾದ್ಯಂತ ಒಟ್ಟು 11 ಬಸ್ ನಿಲ್ದಾಣಗಳು ನಿರ್ಮಾಣವಾಗುತ್ತಿದ್ದು, ಎಲ್ಲ ತಂಗುದಾಣಗಳ ಕಾಮಗಾರಿ ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದೆ. ಈ ನಿಲ್ದಾಣಗಳ ಮೇಲಿರುವ ಗುಂಬಜ್ಗಳನ್ನ ತೆರವು ಮಾಡಿದರೆ ಲಕ್ಷಾಂತರ ರೂಪಾಯಿ ಸಾರ್ವಜನಿಕರ ಹಣ ಪೋಲು ಆಗಲಿದೆ. ಹೀಗಾಗಿ, ಶಾಸಕರು, ಸಂಸದರ ತಿಕ್ಕಾಟದಲ್ಲಿ ಸಾರ್ವಜನಿಕರ ತೆರಿಗೆ ಹಣ ನಷ್ಟವಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ವಿವಾದಿತ ಬಸ್ ತಂಗುದಾಣದ ಮೇಲಿನ ಎರಡು ಗೋಪುರ ತೆರವು: ಎಸ್ ಎ ರಾಮದಾಸ್
ಶಾಸಕ, ಸಂಸದರ ದೊಂಬರಾಟದಲ್ಲಿ ತೆರಿಗೆ ಹಣಕ್ಕೆ ಲೆಕ್ಕ ಕೊಡೋರು ಯಾರು?, ಈ ನಷ್ಟ ಭರಿಸೋದು ಯಾರು?, ಉಳಿದ 10 ಬಸ್ ತಂಗುದಾಣಗಳ ಮೇಲಿನ ಚಿಕ್ಕ ಗೋಪುರ ಕೆಡವುತ್ತೀರಾ? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶಾಸಕ ರಾಮದಾಸ್, ಉಳಿದ ಬಸ್ ತಂಗುದಾಣಗಳ ಬಗ್ಗೆ ಹಿರಿಯರ ಸಲಹೆ ಪಡೆದು ನಿರ್ಧಾರ ಅಂತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.