ಮೈಸೂರು: ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಧಿಸೂಚನೆಯನ್ನು ರದ್ದುಗೊಳಿಸಿ, ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಬೇಕೆಂದು ಸರ್ಕಾರಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಇದರ ಜೊತೆಗೆ ಲಾಕ್ಡೌನ್ ಅವಧಿಯನ್ನು ಕರ್ತವ್ಯದ ಅವಧಿಯೆಂದು ಪರಿಗಣಿಸಿ ಪೂರ್ಣಪ್ರಮಾಣದ ವೇತನ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಯಿತು.
ಕಳೆದ 20 ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು ನಮಗೆ ಯಾವುದೇ ಭದ್ರತೆ ಇಲ್ಲದೆ ಜೀವನ ಮಾಡುತ್ತಿದ್ದೇವೆ. ಲಾಕ್ಡೌನ್ನಿಂದ ನಮ್ಮ ಬದುಕು ಮತ್ತಷ್ಟು ದುರ್ಬರವಾಗಿದೆ ಎಂದು ಉಪನ್ಯಾಸಕರು ಬೇಸರ ಹೊರಹಾಕಿದಾರೆ.
ರಾಜ್ಯ ಸರ್ಕಾರ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅಧಿಸೂಚನೆ ಹೊರಡಿಸಿ ನಮಗೆ ಸಾಮೂಹಿಕ ನಿವೃತ್ತಿ ಘೋಷಿಸುತ್ತಿದೆ. ಇದರಿಂದ ನಮಗೆ ಬಹಳಷ್ಟು ಅನ್ಯಾಯವಾಗಲಿದೆ. ಹರಿಯಾಣ ಮತ್ತು ಪಶ್ಚಿಮ ಬಂಗಾಳದ ಮಾದರಿಯಲ್ಲಿ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.