ಮೈಸೂರು: ಮೈಸೂರುನ ಮೇಯರ್, ಉಪಮೇಯರ್ ಚುನಾವಣೆ ಕುರಿತಂತೆ ಮಾಜಿ ಸಚಿವ ಜಿ ಟಿ ದೇವೇಗೌಡರು ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಸಪೋರ್ಟ್ ಮಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಾನು ಬೆಂಗಳೂರಿಗೆ ಹೋಗಿದ್ದಾಗ ರೈಲ್ವೆ ನಿಲ್ದಾಣದಲ್ಲಿ ಸಿಕ್ಕಿದ್ದ ಜಿ ಟಿ ದೇವೇಗೌಡ ಅವರೊಂದಿಗೆ ಮಾತನಾಡಿದ್ದೀನಿ. ಪಕ್ಷದ ವರಿಷ್ಠರು ಯಾವ ಸೂಚನೆ ನೀಡುತ್ತಾರೋ, ಅದಕ್ಕೆ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಮಾಜಿ ಸಚಿವ ಸಾ ರಾ ಮಹೇಶ್ ಹೇಳಿದ್ದಾರೆ.
ಮೇಯರ್-ಉಪಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮುಖಂಡರ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿ ಟಿ ದೇವೇಗೌಡ ಹಾಗೂ ಹೆಚ್ ಡಿ ಕುಮಾರಸ್ವಾಮಿ ಅವರ ನಡುವೆ ಯಾವುದೇ ಮನಸ್ತಾಪವಿಲ್ಲ. ಕುಟುಂಬದಲ್ಲಿ ಮನಸ್ತಾಪಗಳಿರುವಂತೆ, ಪಕ್ಷದಲ್ಲೂ ಇರುತ್ತದೆ. ಆದರೆ, ಅದೆಲ್ಲ ಮುಂದಿನ ದಿನಗಳಲ್ಲಿ ಸರಿಹೋಗುತ್ತದೆ. ಜಿಟಿಡಿ ಅವರು ಜೆಡಿಎಸ್ ಬಿಟ್ಟು ಬಿಜೆಪಿಗೆ ಹೋದಾಗ, ಮತ್ತೆ ನಾವು ನಮ್ಮ ಪಕ್ಷಕ್ಕೆ ಕರೆದುಕೊಂಡು ಬಂದಿಲ್ಲವೇ? ಜಿಟಿಡಿ ಸೂಚಿಸಿದರೆ ಅವರ ಮನೆಗೆ ಹೋಗಿ ಮೇಯರ್ ಚುನಾವಣೆಗೆ ಕರೆದುಕೊಂಡು ಬರುತ್ತೀವಿ ಎಂದರು.
ಕಾಂಗ್ರೆಸ್-ಜೆಡಿಎಸ್ ಒಪ್ಪಂದದಂತೆ ಮೊದಲ ವರ್ಷ ಕಾಂಗ್ರೆಸ್ ಪಕ್ಷದವರು ಮೇಯರ್ ಆಗಿದ್ದಾರೆ. 2ನೇ ವರ್ಷ ಜೆಡಿಎಸ್‌ನಿಂದ ಮೇಯರ್ ಆಗುತ್ತಾರೆ. ಮೂರನೇ ವರ್ಷ ಕಾಂಗ್ರೆಸ್ಗೆ ಮೇಯರ್ ಪಟ್ಟ ಬಿಟ್ಟು ಕೊಡ್ತೀವಿ. 4ನೇ ಹಾಗೂ 5ನೇ ವರ್ಷ ಜೆಡಿಎಸ್‌ಗೆ ಮೇಯರ್ ಸ್ಥಾನ ಸಿಗಲಿದೆ ಎಂದರು.