ಮೈಸೂರು: ಚಾಮುಂಡಿ ಬೆಟ್ಟದ ಮೇಲೆ ಅಭಿವೃದ್ಧಿ ಕೆಲಸ ಮಾಡುವ ಮುನ್ನ ತಜ್ಞರ ಅಭಿಪ್ರಾಯ ಪಡೆಯಬೇಕು ಹಾಗೂ ಪರಿಸರಕ್ಕೆ ಪೂರಕವಾದ ಕೆಲಸವನ್ನ ಮಾತ್ರ ಮಾಡಬೇಕು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಕೇಂದ್ರ ಸರ್ಕಾರದ ಪ್ರಸಾದ್ ಯೋಜನೆಯನ್ನ ಪರಿಷ್ಕರಣೆ ಮಾಡಬೇಕು ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೈಸೂರಿನ ಚಾಮುಂಡಿ ಬೆಟ್ಟದ ಮೇಲೆ ಕೇಂದ್ರ ಸರ್ಕಾರದ ಪ್ರಸಾದ್ ( PRASAD- Pilgrimage Rejuvenation And Spiritual Augmentation Drive ) ಯೋಜನೆಯಡಿ ರಾಜ್ಯ ಪ್ರವಾಸೋದ್ಯಮ ಇಲಾಖೆ ಮಾಡಲು ಉದ್ದೇಶಿಸಿರುವ ಅಭಿವೃದ್ಧಿ ಕೆಲಸಗಳು ಬೆಟ್ಟದ ಪ್ರಾಕೃತಿಕ ಸಂರಚನೆಗೆ, ಸಹಜ ಸೌಂದರ್ಯಕ್ಕೆ ಮತ್ತು ಧಾರ್ಮಿಕ ಪಾವಿತ್ರ್ಯಕ್ಕೆ ಕುಂದು ತರಬಹುದು ಎಂದು ಪರಿಸರ ಕಾಳಜಿವುಳ್ಳ ನಾಗರಿಕರು ಮತ್ತು ಈ ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇವಿಯ ಭಕ್ತರು ತುಂಬಾ ಕಳವಳವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೊದಲು ತಜ್ಞರ ಅಭಿಪ್ರಾಯ ಪಡೆಯಬೇಕೆಂದು ಮತ್ತು ಪರಿಸರಕ್ಕೆ ಪೂರಕವಾದ ಕೆಲಸಗಳನ್ನು ಮಾತ್ರ ಮಾಡಬೇಕೆಂದು ಒತ್ತಾಯಿಸುತ್ತಿರುವುದು ಮಾಧ್ಯಮಗಳ ಮೂಲಕ ತಿಳಿಯಿತು ಎಂದರು.
ತಜ್ಞರು ಮತ್ತು ಪರಿಸರ ಪ್ರೇಮಿಗಳ ಜೊತೆಗೆ ಚರ್ಚೆ: ಚಾಮುಂಡಿ ಬೆಟ್ಟ ನಾನು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವುದರಿಂದ, ಮಾಧ್ಯಮಗಳಲ್ಲಿ ಬಂದಿರುವ ಈ ವರದಿಗಳನ್ನು ನಾನು ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ಕೆಲವು ತಜ್ಞರು ಮತ್ತು ಪರಿಸರ ಪ್ರೇಮಿಗಳ ಜೊತೆಗೆ ಚರ್ಚೆ ಮಾಡಿದಾಗ, ಇವರೆಲ್ಲ ವ್ಯಕ್ತಪಡಿಸುತ್ತಿರುವ ಅಭಿಪ್ರಾಯ ಸರಿಯಿದೆ ಎಂದು ನನಗೆ ಅನಿಸಿದೆ. ಚಾಮುಂಡಿ ಬೆಟ್ಟದ ಪ್ರಾಕೃತಿಕ ಸಂರಚನೆ ತುಂಬಾ ಸೂಕ್ಷ್ಮ ಮತ್ತು ದುರ್ಬಲವಾಗಿದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಹೀಗಿರುವಾಗ ಬೆಟ್ಟದ ಧಾರಣಾ ಸಾಮರ್ಥ್ಯ ತಿಳಿಯದೆ ಕಾಂಕ್ರಿಟ್ ಕಟ್ಟಡಗಳನ್ನು ಕಟ್ಟುವುದು ಅಪಾಯಕಾರಿ ಆಗುವ ಸಂಭವವಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಸಾದ್ ಯೋಜನೆ ಜಾರಿ ಮುನ್ನ ಜನಾಭಿಪ್ರಾಯ ಅಗತ್ಯ: ಚಾಮುಂಡಿ ಬೆಟ್ಟ ಉಳಿಸಿ ಸಮಿತಿಯ ಆಗ್ರಹ
ಪರಿಸರ ತಜ್ಞರು ಮತ್ತು ಪರಂಪರೆ ತಜ್ಞರ ಅಭಿಪ್ರಾಯ ಸೂಕ್ತ: ಈ ಕ್ಷೇತ್ರದ ಶಾಸಕನಾಗಿ ಚಾಮುಂಡಿ ಬೆಟ್ಟದ ರಕ್ಷಣೆ ಮಾಡುವುದು ಮತ್ತು ಚಾಮುಂಡೇಶ್ವರಿ ದೇವಿಯ ಭಕ್ತರು ಹಾಗೂ ಪರಿಸರದ ಬಗ್ಗೆ ಕಾಳಜಿ ಹೊಂದಿರುವ ನಾಗರಿಕರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದು ನನ್ನ ಆದ್ಯ ಕರ್ತವ್ಯ. ಆದುದರಿಂದ ಚಾಮುಂಡಿ ಬೆಟ್ಟದ ಮೇಲೆ ಕೇಂದ್ರ ಸರ್ಕಾರದ ಪ್ರಸಾದ್ ಯೋಜನೆಯಡಿ ಮಾಡಲು ಉದ್ದೇಶಿಸಿರುವ ಅಭಿವೃದ್ಧಿ ಕೆಲಸಗಳನ್ನು ಪ್ರಾರಂಭ ಮಾಡುವ ಮೊದಲು ಭೂ ವಿಜ್ಞಾನಿಗಳು, ಪರಿಸರ ತಜ್ಞರು ಮತ್ತು ಪರಂಪರೆ ತಜ್ಞರ ಅಭಿಪ್ರಾಯ ಪಡೆಯುವುದು ಸೂಕ್ತ. ವಿವಿಧ ತಜ್ಞರು ತಮ್ಮ ಅಭಿಪ್ರಾಯ ಕೊಡುವ ತನಕ ಬೆಟ್ಟದ ಮೇಲೆ ಯಾವುದೇ ರೀತಿಯ ಕೆಲಸಗಳನ್ನು ಮಾಡಬಾರದು ಎಂದು ಸಂಬಂಧಿಸಿದವರಲ್ಲಿ ಆಗ್ರಹ ಮಾಡುವೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಂಡು ವಿವಿಧ ತಜ್ಞರ ಜೊತೆಗೆ ಸಮಾಲೋಚನೆ ನಡೆಸಲು ಸೂಚಿಸುವೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ ಟಿ. ದೇವೇಗೌಡ ತಿಳಿಸಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ಬಿಜೆಪಿ ನಿಯೋಗದಿಂದ ದೂರು