ಮೈಸೂರು: ಬೆಳಗೊಳ-ಕುಶಾಲನಗರ ರೈಲ್ವೆ ಮಾರ್ಗಕ್ಕೆ ಪ್ರಾರಂಭಿಕವಾಗಿ ಅನುದಾನವನ್ನು ಈ ಸಾಲಿನ ಬಜೆಟ್‌ನಲ್ಲಿ ಬಿಡುಗಡೆ ಮಾಡುವಂತೆ ಕೋರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಂಸದ ಪ್ರತಾಪಸಿಂಹ ಮನವಿ ಮಾಡಿದರು.
ರಾಜ್ಯದಲ್ಲಿ ಅತಿ ಚಿಕ್ಕದಾದ ಜಿಲ್ಲೆ ಹಾಗೂ ರೈಲ್ವೆ ಸಂಪರ್ಕದಿಂದ ವಂಚಿತರಾಗಿರುವ ಏಕೈಕ ಜಿಲ್ಲೆ ಕೊಡಗು. ಈ ಜಿಲ್ಲೆಗೆ ರೈಲ್ವೆ ಸಂಪರ್ಕ ಕಲ್ಪಿಸಬೇಕೆಂದು ಬ್ರಿಟಿಷರ ಕಾಲದಿಂದ ಬೇಡಿಕೆಯಿದ್ದು, ಯಾವ ಸರ್ಕಾರ ಬಂದರೂ ಯೋಜನೆಗೆ ಅನುಮೋದನೆ ದೊರಕಿರುವುದಿಲ್ಲ. ಈ ಯೋಜನೆಗೆ ಪ್ರಧಾನಿ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ 2019-20ರ ಸಾಲಿನ ಬಜೆಟ್‌ನಲ್ಲಿ 1,855 ಕೋಟಿ ರೂ.ಅನುದಾನ ಅನುಮೋದನೆಗೊಂಡಿರುತ್ತದೆ. ತದನಂತರ ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರು ಮೈಸೂರು-ಕುಶಾಲನಗರ ರೈಲ್ವೆ ಯೋಜನೆಗೆ ಅನುದಾನ ಕೋರಿ ಪತ್ರದ ಮುಖೇನ ಮನವಿ ಮಾಡಿರುತ್ತಾರೆ. ಅದರಂತೆ ತಾವು ಸಕರಾತ್ಮಕವಾಗಿ ಸ್ಪಂದಿಸಿದ್ದು, ಮೈಸೂರು(ಬೆಳಗೋಳ)-ಕುಶಾಲನಗರ ಸಂಪರ್ಕಿಸುವ ಸುಮಾರು 87 ಕಿ.ಮೀ. ಉದ್ದದ ಹೊಸ ರೈಲು ಮಾರ್ಗಕ್ಕೆ ರಾಜ್ಯ ಸರ್ಕಾರದಿಂದ ಉಚಿತವಾಗಿ ಭೂಮಿಯನ್ನು ನೀಡುವಂತೆ ಹಾಗೂ ಸದರಿ ಕಾಮಗಾರಿಗೆ ಪ್ರಾರಂಭಿಕವಾಗಿ ಈ ಸಾಲಿನ ಬಜೆಟ್‌ನಲ್ಲಿ ಸ್ವಲ್ಪ ಮಟ್ಟಿಗೆ ಅನುದಾನವನ್ನು ಬಿಡುಗಡೆ ಮಾಡುವ ಮೂಲಕ ಕಾಮಗಾರಿಯನ್ನು ಆರಂಭಿಸುವಂತೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಅಲ್ಲದೇ ಮೈಸೂರು ವಿಮಾನ ನಿಲ್ದಾಣದ ರನ್‌ವೇಯನ್ನು 2.8 ಕಿ.ಮೀ.ಗೆ ವಿಸ್ತರಿಸುವ ಯೋಜನೆಯನ್ನು ಈ ಬಜೆಟ್‌ನಲ್ಲಿ ಸೇರಿಸಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು.