ಮೈಸೂರು: ಶರನ್ನವರಾತ್ರಿಯಲ್ಲಿ ರಾಜವಂಶಸ್ಥರಾದ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಅವರು ಖಾಸಗಿ ದರ್ಬಾರ್ ನಡೆಸಲು ದರ್ಬಾರ್ ಹಾಲ್ನಲ್ಲಿ ರತ್ನಖಚಿತ ಸಿಂಹಾಸನ ಜೋಡಣೆ ಮಾಡಲಾಯಿತು.
ಇಂದು ಅಕ್ಟೋಬರ್ 1ರ ಶುಭ ಶುಕ್ರವಾರ, ಭಾದ್ರಪದ ಮಾಸದ ಕೃಷ್ಣ ಪಕ್ಷ, ದಶಮಿಯ ಶುಭ ತುಲಾ ಲಗ್ನದಲ್ಲಿ ಬೆಳಗ್ಗೆ 9.15ರಿಂದ 9.30ರವರ ಸಮಯದಲ್ಲಿ ಅರಮನೆಯ ದರ್ಬಾರ್ ಹಾಲ್ನಲ್ಲಿ ಚಿನ್ನದ ಸಿಂಹಾಸನ ಹಾಗೂ ಕನ್ನಡಿತೊಟ್ಟಿಯಲ್ಲಿ ಬೆಳ್ಳಿಯ ಭದ್ರಾಸನ ಜೋಡಣೆ ನಡೆದಿದೆ.
ಈ ಬಾರಿ ಅರಮನೆಯ ಶರನ್ನವರಾತ್ರಿ ಅಕ್ಟೋಬರ್ 7ರಿಂದ ಆರಂಭವಾಗಲಿದ್ದು, ಅಂದು ಈ ರತ್ನಖಚಿತ ಸಿಂಹಾಸನಕ್ಕೆ ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪೂಜೆ ಸಲ್ಲಿಸಿ ರಾಜಪರಂಪರೆಯಂತೆ ಶರನ್ನವರಾತ್ರಿಯಲ್ಲಿ ಪ್ರತಿದಿನ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಈ ಬಾರಿಯ ಖಾಸಗಿ ದರ್ಬಾರ್ಗೆ ಪ್ರವಾಸಿಗರು, ಸಾರ್ವಜನಿಕರು ಸೇರಿದಂತೆ ಎಲ್ಲರಿಗೂ ನಿರ್ಬಂಧ ವಿಧಿಸಲಾಗಿದ್ದು, ಕೇವಲ ರಾಜಮನೆತನದವರು ಮಾತ್ರ ಸಾಂಪ್ರದಾಯಿಕ ಪೂಜೆ ಸಲ್ಲಿಸಲಿದ್ದಾರೆ.
ಪೂಜಾ ವಿಧಿ-ವಿಧಾನಗಳೇನು? :
ರತ್ನಖಚಿತ ಸಿಂಹಾಸನವನ್ನು ದರ್ಬಾರ್ ಹಾಲ್ಗೆ ತರುವ ಮುನ್ನ ಅರಮನೆಯ ಸ್ಟ್ರಾಂಗ್ ರೂಂನಲ್ಲಿ ಬಿಡಿ ಬಿಡಿಯಾಗಿ ಇರುವ ಸಿಂಹಾಸನ ತಂದು ಜೋಡಿಸಲಾಯಿತು. ಇದಕ್ಕೂ ಮುನ್ನ ಬೆಳಗ್ಗೆ ಅರಮನೆಯೊಳಗೆ ರಾಜಮನೆತನದ ರಾಜ ಪುರೋಹಿತರು ಪೂಜಾ ಕೈಂಕರ್ಯಗಳು, ಹೋಮ ಹವನಗಳನ್ನು ನೆರವೇರಿಸಿ ಶಾಂತಿ ಹೋಮ ನಡೆಸಿದರು. ಆ ನಂತರ ಸಿಂಹಾಸನ ಜೋಡಣೆ ನಡೆಯಿತು.
ರತ್ನ ಖಚಿತ ಸಿಂಹಾಸನವು ಅಕ್ಟೋಬರ್ 1ರಿಂದ ಅಕ್ಟೋಬರ್ 31ರವರೆಗೆ ದರ್ಬಾರ್ ಹಾಲ್ನಲ್ಲಿರಲಿದ್ದು, ಅಕ್ಟೋಬರ್ 31ರಂದು ಅಲ್ಲಿಂದ ವಿಸರ್ಜನೆ ಮಾಡಲಾಗುತ್ತದೆ.
ಇದನ್ನೂ ಓದಿ: ಮಾರಮ್ಮನ ಜಾತ್ರೆಯಲ್ಲಿ ಮಾರಾಮಾರಿ..ಕುರಿ ಕಡಿಯುವ ವಿಚಾರಕ್ಕೆ ಗುಂಪುಗಳು ನಡುವೆ ಗಲಾಟೆ