ಮೈಸೂರು: ಗೌರಿ ಗಣೇಶ ಹಬ್ಬ ಹತ್ತಿರ ಬರುತ್ತಿದೆ. ಪರಿಸರಸ್ನೇಹಿ ಗಣೇಶ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಸಾಂಸ್ಕೃತಿಕ ನಗರಿಯಲ್ಲಿ ಗಣೇಶನ ಕೈಯಲ್ಲಿ ಬಾಲರೂಪದ ಅಪ್ಪು ಹಾಗೂ ಗಣೇಶನ ವಿಗ್ರಹಕ್ಕೆ ಬೇಡಿಕೆ ಹೆಚ್ಚಾಗಿದೆ.
ಪುನೀತ್ ರಾಜ್ಕುಮಾರ್ ಕಿರಿಯ ವಯಸ್ಸಿನಲ್ಲೇ ನಿಧನರಾದರು. ಅವರ ಅಭಿಮಾನಿಗಳು ನಟನ ಅಗಲಿಕೆಯ ನಂತರವೂ ಅವರನ್ನು ಬೇರೆ ಬೇರೆ ರೂಪದಲ್ಲಿ ನೋಡಲು ಬಯಸುತ್ತಿದ್ದು, ಈ ಬಾರಿ ಗಣೇಶ ಪೂಜೆಯಲ್ಲೂ ಅಪ್ಪುವನ್ನು ನೋಡುತ್ತಿದ್ದಾರೆ. ಹೀಗಾಗಿ, ಗಣೇಶ ಮೂರ್ತಿಯ ಜೊತೆಗೆ ಅಪ್ಪುವಿನ ಮೂರ್ತಿ ಇರುವ ಹಾಗೆ ಬೇಡಿಕೆ ಇಡುತ್ತಿದ್ದಾರೆ.
ಮೈಸೂರಿನ ಕೆ ಟಿ ಸ್ಟ್ರೀಟ್ನಲ್ಲಿರುವ ಮಂಜುನಾಥ್ ಅವರು ಜೇಡಿ ಮಣ್ಣಿನಿಂದ ಪರಿಸರಸ್ನೇಹಿ ಗಣೇಶನ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ಈ ಬಾರಿ ಅವರಿಗೆ ಅಪ್ಪು ಹಾಗೂ ಗಣೇಶನನ್ನು ಒಟ್ಟಿಗೆ ಇರುವಂತೆ ಮೂರ್ತಿ ತಯಾರು ಮಾಡಲು ಆರ್ಡರ್ಗಳು ಬರುತ್ತಿವೆ.
ನಾಲ್ಕೈದು ಆರ್ಡರ್ ಬಂದಿವೆ: "ನಾವು ಪ್ರತಿವರ್ಷ ಜೇಡಿಮಣ್ಣಿನಿಂದ ಗಣೇಶನ ವಿಗ್ರಹವನ್ನು ಮಾಡಿಕೊಡುತ್ತೇವೆ. ಗಣಪತಿ ಕೂರಿಸುವವರು ಯಾವ ರೀತಿ ವಿಗ್ರಹ ಬೇಕು ಅನ್ನುತ್ತಾರೋ ಆ ರೀತಿಯೇ ತಯಾರಿಸಿಕೊಡುತ್ತೇವೆ. ಈ ಸರಿ ಪುನೀತ್ ರಾಜ್ಕುಮಾರ್ ವಿಗ್ರಹವನ್ನು ಗಣಪತಿ ಜೊತೆ ಇರುವಂತೆ ತಯಾರಿಸಿಕೊಡಬೇಕಾಗಿ ಕೇಳಿಕೊಂಡಿದ್ದಾರೆ. ನಾನು ಈಗ ಒಂದು ವಿಗ್ರಹವನ್ನು ಮಾಡಿದ್ದೇನೆ. ಅದನ್ನು ತಯಾರಿಸೋಕೆ 8 ರಿಂದ 10 ದಿನ ಬೇಕು" ಎನ್ನುತ್ತಾರೆ ಗಣೇಶ ಮೂರ್ತಿ ತಯಾರಕ ಮಂಜುನಾಥ್.
ಜೇಡಿಮಣ್ಣಿನ ಗಣಪತಿ ವಿಗ್ರಹ: "ಕಳೆದ ಎರಡು ವರ್ಷದಿಂದ ವ್ಯಾಪಾರಿ ಚೆನ್ನಾಗಿರಲಿಲ್ಲ. ಈಗ ಸಾರ್ವಜನಿಕವಾಗಿ ಗಣೇಶನ ವಿಗ್ರಹ ಸ್ಥಾಪನೆಗೆ ಅವಕಾಶ ನೀಡಿರುವುದು ನಮಗೆ ಅನುಕೂಲವಾಗಿದೆ. ಸರ್ಕಾರ ಪಿಓಪಿ ಗಣೇಶನ ವಿಗ್ರಹವನ್ನು ಸಂಪೂರ್ಣ ಬ್ಯಾನ್ ಮಾಡಿದೆ. ಹೀಗಾಗಿ, ಜೇಡಿಮಣ್ಣಿನ ಗಣಪತಿ ವಿಗ್ರಹವನ್ನು ತಯಾರು ಮಾಡುತ್ತಿದ್ದೇವೆ. ಭಕ್ತಾದಿಗಳು ಪರಿಸರದ ಬಗ್ಗೆ ಕಾಳಜಿವಹಿಸಿ ಮಣ್ಣಿನ ಗಣಪತಿ ಬಳಸಿದರೆ ನಮಗೂ ಅನುಕೂಲ" ಎನ್ನುತ್ತಾರೆ ಗಣೇಶ ಮೂರ್ತಿ ತಯಾರಕ ಮಂಜುನಾಥ್.
ಇದನ್ನೂ ಓದಿ: ಕಾರವಾರದಲ್ಲಿ ಬಿಸಿಲು, ಮಳೆಗೆ ನೆಲಕಚ್ಚಿದ ತರಕಾರಿ: ಸಾವಯವ ಕೃಷಿಕರು ಕಂಗಾಲು