ಮೈಸೂರು : ಜೆಡಿಎಸ್ ವರಿಷ್ಠರೊಂದಿಗೆ ಹಾಗೂ ಪಕ್ಷದ ಕಾರ್ಯಕ್ರಮಗಳಿಂದ ಎರಡು ವರ್ಷದಿಂದ ದೂರ ಉಳಿದಿದ್ದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ ಟಿ ದೇವೇಗೌಡ ಕೊನೆಗೂ ಮೌನ ಮುರಿದಿದ್ದಾರೆ. ಜಾತ್ಯಾತೀತ ಜನತಾದಳ ಪಕ್ಷ ಬಿಟ್ಟು ಕಾಂಗ್ರೆಸ್ ಸೇರುವುದಾಗಿ ಖಚಿತ ಪಡಿಸಿದ್ದಾರೆ.
ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ನನ್ನೊಂದಿಗೆ ಮಾತನಾಡಿದ್ದಾರೆ. ಇದರ ಬಗ್ಗೆ ಜೆಡಿಎಸ್ ಪಕ್ಷದ ವರಿಷ್ಠರಾದ ಹೆಚ್ ಡಿ ದೇವೇಗೌಡ ಅವರ ಗಮನಕ್ಕೆ ತಂದಿದ್ದೀನಿ. ಆದರೆ, ಅವರು ನನ್ನೊಂದಿಗೆ ಮಾತನಾಡಿಲ್ಲ. ನನ್ನ ಮಗ ಹರೀಶ್ ಗೌಡನ ರಾಜಕೀಯ ಜೀವನ ಭದ್ರ ಮಾಡಿಕೊಂಡು ಖಚಿತ ಪಡಿಸುತ್ತೇನೆ ಎಂದರು.
ಹೆಚ್ ಡಿ ಕುಮಾರಸ್ವಾಮಿ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗಿನಿಂದ ಮಾನಸಿಕವಾಗಿ ನನಗೆ ಸಾಕಷ್ಟು ನೋಯಿಸಿದ್ದಾರೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು, ಕೊಡಗಿಗೆ ಹೋಗಿದ್ದ ಸಂದರ್ಭದಲ್ಲಿ ನನಗೆ ಮನಸೋ ಇಚ್ಛೆ ಮಾತನಾಡಿದ್ದಾರೆ. ಅವರ ಮಾತುಗಳನ್ನು ಸಹಿಸಿಕೊಂಡು ಬಂದಿದ್ದೀನಿ ಎಂದು ಬೇಸರ ಹೊರ ಹಾಕಿದರು.
ಓದಿ: 'ನಮ್ಮಲ್ಲಿ ಒಡಕಿನ ಪ್ರಶ್ನೆಯೇ ಇಲ್ಲ, ಸಣ್ಣಪುಟ್ಟ ಅಪೇಕ್ಷೆಗಳಿಗೆ ಸ್ಪಂದಿಸಲಾಗುತ್ತಿದೆ'