ಮೈಸೂರು: ಮಹಿಷ ದಸರಾ ಆಚರಣೆಯು ಮೈಸೂರು ದಸರಾ ಅಥವಾ ಚಾಮುಂಡಿ ತಾಯಿ ವಿರುದ್ಧ ಅಲ್ಲ. ಮಹಿಷನ ಬಗ್ಗೆ ದೇಶದ ಉದ್ದಗಲಕ್ಕೂ ಮಾಹಿತಿ ಕಲೆ ಹಾಕಿ, ಮಹಿಷ ದಸರಾದ ಬಗ್ಗೆ ವಿಚಾರ ಸಂಕಿರಣ ಮಾಡುತ್ತೇವೆ ಎಂದು ಮಹಿಷ ದಸರಾ ಆಚರಣಾ ಸಮಿತಿಯ ಸದಸ್ಯ ಮಾಜಿ ಮೇಯರ್ ಪುರುಷೊತ್ತಮ್ ಹೇಳಿದರು.
ಇಂದು ಪತ್ರಕರ್ತರ ಸಂಘದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಮಾಜಿ ಮೇಯರ್ ಪುರುಷೋತ್ತಮ್, ಪ್ರೊ.ಮಹೇಶ್ ಚಂದ್ರಗುರು, ಪ್ರೊ.ಕೆ.ಎಸ್.ಭಗವಾನ್ ಮಾತನಾಡಿದರು. ಪುರುಷೋತ್ತಮ್ ಮಾತನಾಡಿ, ನಾವು ನೀಡುವ ಮಾಹಿತಿ ಸುಳ್ಳು ಎಂದು ಸಾಬೀತಾದರೆ ಇನ್ಮುಂದೆ ಮಹಿಷಾ ದಸರಾ ಆಚರಣೆ ಮಾಡುವುದಿಲ್ಲ ಎಂದರು.
ಉಪೇಂದ್ರರನ್ನು ಜೈಲಿಗೆ ಕಳುಹಿಸುವವರೆಗೂ ನಿದ್ರೆ ಬರುವುದಿಲ್ಲ: ನಟ ಉಪೇಂದ್ರ ಅವರು ನೀಡಿರುವ ನಿಂದನಾತ್ಮಕ ಹೇಳಿಕೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅವರನ್ನು ಕೂಡಲೇ ಬಂಧಿಸಬೇಕು. ಅವರ ಬಂಧನ ಆಗುವವರೆಗೂ ನಮಗೆ ನಿದ್ದೆ ಬರುವುದಿಲ್ಲ ಎಂದು ಪುರುಷೋತ್ತಮ್ ತಿಳಿಸಿದರು.
ಸಮಿತಿ ಸದಸ್ಯ ಪ್ರೊ.ಮಹೇಶ್ ಚಂದ್ರಗುರು ಮಾತನಾಡಿ, ಹಿಂದುತ್ವವಾದಿಗಳು ಮಹಿಷ ದಸರಾ ಆಚರಣೆ ವಿರೋಧಿಸುತ್ತಿದ್ದಾರೆ. ಸಂಘ ಪರಿವಾರದವರು ಸೃಷ್ಟಿ ಮಾಡುವ ಸುಳ್ಳಿನ ಸರಮಾಲೆಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಮಹಿಷ ಪ್ರಾಧಿಕಾರ ರಚನೆ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ. ಮಹಿಷ ಅಧ್ಯಯನ ಪೀಠ ಸ್ಥಾಪನೆಗೆ ಒತ್ತಾಯಿಸುತ್ತೇವೆ. ಗುಲ್ಬರ್ಗ, ಮೈಸೂರು, ಬೆಂಗಳೂರು ವಿಶ್ವವಿದ್ಯಾನಿಲಯ ಸೇರಿದಂತೆ ಇತರ ವಿವಿಗಳಲ್ಲಿ ಮಹಿಷ ಅಧ್ಯಯನ ಪೀಠ ಸ್ಥಾಪನೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸುತ್ತೇವೆ. ಮಹಿಷ ಬೌದ್ಧನಾಗಿದ್ದಾನೆ. ಹೀಗಾಗಿ ಮಹಿಷ ಬೌದ್ಧ ದಸರಾವನ್ನು ಆಚರಿಸುತ್ತೇವೆ. ವಿರೋಧಿಸುವವರಿಗೆ ತಕ್ಕ ಉತ್ತರ ಕೊಡುತ್ತೇವೆ ಎಂದು ಹೇಳಿದರು.
ಸಂಸದ ಪ್ರತಾಪ್ ಸಿಂಹ ನನ್ನ ಶಿಷ್ಯ- ಪ್ರೊ.ಮಹೇಶ್ ಚಂದ್ರಗುರು: ಸಂಸದ ಪ್ರತಾಪ್ ಸಿಂಹ ಕಟ್ಟರ್ ಹಿಂದುತ್ವವಾದಿ. ನಾವು ಮಾನವತಾವಾದಿಗಳು. ಮಾನವತಾವಾದಿಗಳಾಗಿರುವ ನಮ್ಮ ಮುಂದೆ ಕಟ್ಟರ್ ಹಿಂದುತ್ವವಾದಿ ಪ್ರತಾಪ್ ಸಿಂಹ ಆಟ ನಡೆಯುವುದಿಲ್ಲ. ಸಿದ್ದರಾಮಯ್ಯನವರ ಸ್ವಜಾತಿ ಪ್ರೇಮದಿಂದಾಗಿ ಲೋಕಸಭೆ ಚುನಾವಣೆಯಲ್ಲಿ ಪ್ರತಾಪ್ಸಿಂಹಗೆ ಗೆಲುವು ಸಿಕ್ಕಿತು. ಹೆಚ್.ವಿಶ್ವನಾಥ್, ಸಿ.ಹೆಚ್.ವಿಜಯಶಂಕರ್ ಅವರ ಬದಲು ಬೇರೆ ಸಮುದಾಯದವರಿಗೆ ಟಿಕೆಟ್ ಕೊಟ್ಟಿದ್ದರೆ ಪ್ರತಾಪ್ ಸಿಂಹ ಗೆಲ್ಲುತ್ತಿರಲಿಲ್ಲ. ಒಕ್ಕಲಿಗ ಅಥವಾ ವೀರಶೈವರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿದ್ದರೆ ಖಂಡಿತ ಪ್ರತಾಪ್ ಸಿಂಹ ಗೆಲ್ಲುತ್ತಿರಲಿಲ್ಲ. ಸಿಎಂ ಸಿದ್ದರಾಮಯ್ಯಗೆ ಸ್ವಜಾತಿ ಮೇಲೆ ಪ್ರೇಮವಿದೆ ಎಂದು ಕುಟುಕಿದ ಅವರು, ಪ್ರತಾಪ್ ಸಿಂಹ ನನ್ನ ವಿದ್ಯಾರ್ಥಿ. ಆತ ತನ್ನ ತಪ್ಪನ್ನು ತಿದ್ದಿಕೊಂಡು ನಡೆಯಬೇಕು ಎಂದು ತಿಳಿಸಿದರು.
ರಾಜ್ಯದಲ್ಲಿರುವುದು ಅಹಿಂದ ಪರ ಸರ್ಕಾರ ಅಲ್ಲ: ರಾಜ್ಯದಲ್ಲಿ ಈಗ ಆಡಳಿತದಲ್ಲಿ ಇರುವುದು ಅಹಿಂದ ಪರವಾದ ಸರ್ಕಾರವಲ್ಲ, ಇದು ಮೇಲ್ವರ್ಗದ ಪರವಾದ ಸರ್ಕಾರ. ಅಹಿಂದ ಹೆಸರಿನಲ್ಲಿ ಈ ಸರ್ಕಾರ ಅಸ್ತಿತ್ವಕ್ಕೆ ಬಂತು. ಆದರೂ ಆಳುವವರು ಮೇಲ್ವರ್ಗದವರೇ ಆಗಿದ್ದಾರೆ. ದಲಿತರ ಅಭಿವೃದ್ಧಿ ಇವರಿಂದ ಸಾಧ್ಯವಿಲ್ಲ. ಪರಮೇಶ್ವರ್ ದಲಿತರಿಗಾಗಿ ಎಂದೂ ಕೂಡ ಧ್ವನಿ ಎತ್ತಿಲ್ಲ. ಅವರೊಬ್ಬ ಅವಕಾಶವಾದಿ. ಅನುಕೂಲಕ್ಕೆ ತಕ್ಕಂತೆ ರಾಜಕಾರಣ ಮಾಡುವವರು. ಇವರಿಂದ ದಲಿತರ ಉದ್ಧಾರ ಸಾಧ್ಯವಿಲ್ಲ. ಗೃಹ ಸಚಿವರಾಗಿದ್ದರೂ ದಲಿತರ ಸಮಸ್ಯೆಗೆ ಸ್ಪಂದಿಸಿಲ್ಲ. ಇಂತವರು ಸಿಎಂ ಆದರೂ ಸ್ಪಂದಿಸುವ ನಿರೀಕ್ಷೆಯಿಲ್ಲ ಎಂದು ಪ್ರೊ.ಮಹೇಶ್ ಚಂದ್ರಗುರು ಹೇಳಿಕೆ ನೀಡಿದರು.
ಪ್ರೊ.ಕೆ.ಎಸ್. ಭಗವಾನ್ ಹೇಳಿಕೆ: ಮಹಿಷ ದಸರಾ ಸಮಿತಿಯ ಮತ್ತೋರ್ವ ಸದಸ್ಯ ಪ್ರೊ.ಕೆ.ಎಸ್. ಭಗವಾನ್ ಮಾತನಾಡಿ, ಆರ್‌ಎಸ್ಎಸ್ ಎಂದರೆ ರಾಷ್ಟ್ರೀಯ ಸುಳ್ಳುಗಾರರ ಸಂಘ ಎಂದರ್ಥ
ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: Bommai: ಕಾವೇರಿ ವಿಚಾರದಲ್ಲಿ ರಾಜಕೀಯ ಮಾಡ್ತಿಲ್ಲ, ರೈತರ ಹಿತ ಕಾಯುತ್ತಿದ್ದೇವೆ- ಬೊಮ್ಮಾಯಿ