ಮೈಸೂರು : ಜಿಲ್ಲೆಯ ಹುಣಸೂರು ತಾಲೂಕಿನ ಬಲ್ಲೇನ ಹಳ್ಳಿ ಎಂಬ ಆದಿವಾಸಿ ಹಾಡಿಯಲ್ಲಿ ವಿದೇಶಿ ವಿದ್ಯಾರ್ಥಿಗಳು ಶೌಚಾಲಯ ನಿರ್ಮಿಸಿ ಸ್ವಚ್ಛ ಭಾರತ ಪರಿಕಲ್ಪನೆ ಸಾಕಾರಗೊಳಿಸಿದ್ದಾರೆ. ಬೆಂಗಳೂರಿನ ಎಫ್ಎಸ್ಎಲ್ ಇಂಡಿಯಾ ಸ್ವಯಂ ಸೇವಾ ಸಂಸ್ಥೆ ಮೂಲಕ ಫ್ರಾನ್ಸ್ ನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಈ ಮಹಾತ್ಕಾರ್ಯ ಮಾಡಿದ್ದಾರೆ.
ಫ್ರಾನ್ಸ್ನ ರೋಸಿ, ಕೀಯೂ, ಒಷನ್ ಹಾಗೂ ಲಿಯಾ ಎಂಬ ವಿದ್ಯಾರ್ಥಿಗಳ ತಂಡ ಎನ್ಜಿಓ ಮೂಲಕ ಗಿರಿಜನ ಹಾಡಿಗೆ ಆಗಮಿಸಿ ಆದಿವಾಸಿಗಳ ಕುಟುಂಬದ ಜೀವನ ಶೈಲಿ ಹಾಗೂ ಹಲವು ವಿಷಯಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಇದೇ ವೇಳೆ, ಹಾಡಿಯಲ್ಲಿನ ಆದಿವಾಸಿಗಳಿಗೆ ಶಿಕ್ಷಣ, ಶೌಚಾಲಯ ಬಳಕೆ ಬಗ್ಗೆಯೂ ವಿದೇಶಿ ವಿದ್ಯಾರ್ಥಿಗಳು ಅರಿವು ಮೂಡಿಸಿದ್ದಾರೆ.
ಸ್ವಂತ ದುಡ್ಡಿನಿಂದ ಶೌಚಾಲಯ ನಿರ್ಮಾಣ: ವಿದೇಶಿ ವಿದ್ಯಾರ್ಥಿಗಳು ತಮ್ಮ ಬಿಡುವಿನ ವೇಳೆಯಲ್ಲಿ ತಮ್ಮ ದೇಶದಲ್ಲಿ ದುಡಿದ ಹಣವನ್ನು ಉಳಿತಾಯ ಮಾಡಿ ತಂದಿದ್ದು, ಈ ಹಣದಲ್ಲಿ ಹಾಡಿಯ ಜನರಿಗೆ 3 ಶೌಚಾಲಯವನ್ನು ನಿರ್ಮಿಸಿ ಕೊಟ್ಟಿದ್ದಾರೆ. ಜೊತೆಗೆ ಹಾಡಿಯಲ್ಲಿದ್ದ ಹಳೆಯ ಶಾಲೆಗೆ ತಮ್ಮ ಶ್ರಮದಾನದ ಮೂಲಕ ಬಣ್ಣ ಬಳಿದು ಹಾಡಿಯ ಮಕ್ಕಳಿಗೆ ಇಂಗ್ಲಿಷ್ ಕಲಿಸಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಇದರ ಜೊತೆಗೆ ಶೌಚಾಲಯದ ಬಳಕೆಯ ಬಗ್ಗೆ ಅರಿವು ಮೂಡಿಸಿ, ಶೌಚಾಲಯದ ಗೋಡೆಗಳ ಮೇಲೆ ಅಂದವಾದ ಚಿತ್ರ ಬಿಡಿಸಿದ್ದಾರೆ.
ಭಾರತೀಯ ಜೀವನ ಶೈಲಿಗೆ ಮನಸೋತ ವಿದೇಶಿ ವಿದ್ಯಾರ್ಥಿಗಳು: ಇಲ್ಲಿಗೆ ಸ್ವಯಂಸೇವಕರಾಗಿ ಕಲಿಯಲು ಬಂದ ಫ್ರಾನ್ಸ್ನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹಾಡಿಯ ಜನರ ಜೀವ ಶೈಲಿ, ಆಹಾರ ಪದ್ಧತಿ, ಪ್ರಕೃತಿ ಜೊತೆಗಿನ ಒಡನಾಟ ಸೇರಿದಂತೆ ಹಾಡಿಯ ಮಕ್ಕಳ ಜೊತೆ ಸೇರಿ ಕ್ರೀಡೆಗಳನ್ನು ಆಡುವ ಮೂಲಕ ಆನಂದ ಪಟ್ಟರು. ವಿದೇಶಿ ವಿದ್ಯಾರ್ಥಿಗಳು ಇಲ್ಲಿನ ಸ್ಥಳೀಯ ಉಡುಪುಗಳನ್ನು ಧರಿಸಿ ಹಾಡಿಯ ಜನರೊಂದಿಗೆ ಕುಣಿದು ಕುಪ್ಪಳಿಸಿದರು.
ಓದಿ : ಯಡಿಯೂರಪ್ಪರ ಹೇಳಿಕೆ ಸಲಹೆ ಅಷ್ಟೇ; ರಾಜ್ಯದ ಬಗ್ಗೆ ಮೋದಿ, ಶಾ ತೀರ್ಮಾನ ತೆಗೆದುಕೊಳ್ತಾರೆ: ಸಿಎಂ