ಮೈಸೂರು: ಕಪಿಲಾ ಮತ್ತು ಕಾವೇರಿ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹರಿಬಿಟ್ಟ ಪರಿಣಾಮ ತಲಕಾಡು ಸೇತುವೆ ಮುಳುಗಿದ್ದು, ಪ್ರವಾಹದ ಪರಿಸ್ಥಿತಿ ಉಂಟಾಗಿದೆ.
ಶನಿವಾರ ಕೆ.ಆರ್.ಎಸ್. ನ 34 ಗೇಟ್ಗಳಿಂದ 1 ಲಕ್ಷ ಕ್ಯೂಸೆಕ್ಗೂ ಅಧಿಕ ನೀರನ್ನು ಕಾವೇರಿ ನದಿಗೆ ಬಿಡಲಾಗಿದ್ದು. ಈ ಕಡೆ ಕಬಿನಿ ಜಲಾಶಯದಿಂದ ಕಪಿಲಾ ನದಿಗೆ 1 ಲಕ್ಷದ 20 ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗಿದೆ. ಹೀಗಾಗಿ ತ್ರಿವೇಣಿ ಸಂಗಮದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ತಲಕಾಡು ಹಾಗೂ ಟಿ. ನರಸೀಪುರ ಸಂಪರ್ಕ ಕಡಿತಗೊಂಡಿದೆ. ಅಲ್ಲದೆ ಹೆಮ್ಮಿಗೆ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ಜನರು ಹಾಗೂ ವಾಹನಗಳಿಗೆ ಬದಲಿ ಮಾರ್ಗ ಕಲ್ಪಿಸಲಾಗಿದೆ.
ಟಿ.ನರಸೀಪುರ ಬಳಿಯ ತ್ರಿವೇಣಿ ಸಂಗಮದಲ್ಲಿ ನಿರ್ಮಿಸಲಾಗಿರುವ ತಡೆಗೋಡೆ ಕುಸಿಯುವ ಭೀತಿಯಲ್ಲಿದೆ. ಸಂಗಮದ ಹಲವಾರು ದೇವಾಲಯಗಳು ಮುಳುಗುವ ಭೀತಿ ಇದ್ದು, ನದಿ ಪಾತ್ರದ ಗ್ರಾಮಗಳಲ್ಲಿ ಆತಂಕ ಶುರುವಾಗಿದೆ.