ಮೈಸೂರು: ನಂದಿನಿ ನಕಲಿ ತುಪ್ಪ ತಯಾರಿಸಿ ಮಾರಾಟ ಮಾಡುತ್ತಿದ್ದ ಪ್ರಕರಣ ಸಂಬಂಧ ನಾಲ್ವರ ವಿರುದ್ಧ ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದ್ದು, ಪೊಲೀಸ್ ಹಾಗೂ ಆಹಾರ ಇಲಾಖೆಯಿಂದ ಪ್ರತ್ಯೇಕ ತನಿಖೆ ನಡೆಸಲಾಗುತ್ತಿದೆ.
ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ಬಿ.ಎಂ. ವಿಜಯ್ ಕುಮಾರ್ ದೂರಿನ ಮೇರೆಗೆ ಪೊಲೀಸರು ವಂಚನೆ ಪ್ರಕರಣ ದಾಖಲಿಸಿದ್ದು, ತಮಿಳುನಾಡು ಮೂಲದ ಜೆ.ಪಿ.ನಗರದ ನಿವಾಸಿ ಮುರುಗೇಶ್, ಅಶ್ವಿನಿ, ರಾಯಚೂರು ಮೂಲದ ರಾಘವೇಂದ್ರ ನಗರದ ನಿವಾಸಿ ಎಲ್.ಕುಮಾರ್ ಮತ್ತು ಸಂತೋಷ್ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.
ಪ್ರಕರಣ ಹಿನ್ನೆಲೆ:
ಹೊಸಹುಂಡಿ ಗ್ರಾಮದ ಹೊರವಲಯದಲ್ಲಿರುವ ನಕಲಿ ನಂದಿನಿ ತುಪ್ಪ ತಯಾರಿಕಾ ಘಟಕವನ್ನು ಸ್ಥಳೀಯರ ನೆರವಿನಿಂದ ಮಾನವ ಹಕ್ಕು ಸಂಘಟನೆ ಸದಸ್ಯರು ಗುರುವಾರ ದಾಳಿ ನಡೆಸಿ, ಅಕ್ರಮ ಬಯಲಿಗೆಳೆದಿದ್ದರು. ಅಲ್ಲದೇ ಮೈಮುಲ್ ಹಾಗೂ ಆಹಾರ ಸುರಕ್ಷತೆ, ಗುಣಮಟ್ಟ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅಧಿಕಾರಿಗಳು ಪರಿಶೀಲನೆ ನಡೆಸಿ, ಕಲಬೆರಕೆ ಖಚಿತಪಡಿಸಿದ್ದರು. ಅಲ್ಲಿದ್ದ ಒಂದೂವರೆ ಟನ್ನಷ್ಟು ಕಲಬೆರಕೆ ತುಪ್ಪ, 500 ಕೆಜಿ ವನಸ್ಪತಿ, 500 ಲೀಟರ್ ಪಾಮ್ ಆಯಿಲ್ನ್ನು ವಶಪಡಿಸಿಕೊಂಡು ಗೋಡೌನ್ ಸೀಜ್ ಮಾಡಲಾಗಿತ್ತು.
ಮೈಮುಲ್ ಸಿಬ್ಬಂದಿ ಭಾಗಿಯಾಗಿದ್ದರೆ ಕಠಿಣ ಕ್ರಮ:
ನಂದಿನಿ ನಕಲಿ ತುಪ್ಪ ತಯಾರಿಕೆ ಪ್ರಕರಣದಲ್ಲಿ ಮೈಮುಲ್ ಸಿಬ್ಬಂದಿ ಭಾಗಿಯಾಗಿದ್ದರೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮೈಮುಲ್ ಅಧ್ಯಕ್ಷ ಪ್ರಸನ್ನ ತಿಳಿಸಿದ್ದಾರೆ.
![adulterated-nandini-ghee-selling-case](https://etvbharatimages.akamaized.net/etvbharat/prod-images/13941557_news.png)
ಸಿಬ್ಬಂದಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದರೆ ಸೇವೆಯಿಂದಲೇ ವಜಾಗೊಳಿಸಿ, ಜೈಲಿಗೆ ಕಳುಹಿಸಲಾಗುವುದು. ಕೂಲಂಕಷವಾಗಿ ತನಿಖೆ ನಡೆಸಿ ಸತ್ಯಾಸತ್ಯತೆ ಹೊರತರುವಂತೆ ಪೊಲೀಸರಿಗೆ ಮನವಿ ಮಾಡಲಾಗಿದ್ದು, ಜೊತೆಗೆ ಸರ್ಕಾರದ ಮಟ್ಟದಲ್ಲಿ ತನಿಖೆಗೆ ಮನವಿ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕಲಬೆರಕೆಯಂತಹ ಅಕ್ರಮಗಳನ್ನು ತಡೆಯಲು ವಿಚಕ್ಷಣ ದಳ ಚುರುಕುಗೊಳಿಸಲಾಗುವುದು. ಪ್ರತಿ ವಾರಕ್ಕೊಮ್ಮೆ ಎಲ್ಲಾ ನಂದಿನಿ ಪಾರ್ಲರ್ಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಗುಣಮಟ್ಟ ಕಾಯ್ದುಕೊಳ್ಳುವ ಸಲುವಾಗಿ ಪ್ರತಿ ವಾರ ಉತ್ಪನ್ನಗಳನ್ನು ಲ್ಯಾಬ್ಗೆ ಕಳುಹಿಸಿ ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ.
ಪೊಲೀಸ್ ಹಾಗೂ ಆಹಾರ ಇಲಾಖೆಯಿಂದ ಪ್ರತ್ಯೇಕ ತನಿಖೆ:
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಪ್ರತ್ಯೇಕ ತನಿಖೆ ನಡೆಸುತ್ತಿದ್ದಾರೆ.
ಮೈಮುಲ್ ಅಧಿಕಾರಿಗಳ ದೂರಿನನ್ವಯ ಪ್ರಮುಖ ಆರೋಪಿಗಳು ಎನ್ನಲಾದ ತಮಿಳುನಾಡು ಮೂಲದ ಮುರುಗೇಶ, ಆತನ ಪತ್ನಿ ಅಶ್ವಿನಿ ಹಾಗೂ ಇತರರ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸಿರುವ ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಶಶಿಕುಮಾರ್ ನೇತೃತ್ವದ ತಂಡವು ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಿದೆ.
ಗುರುವಾರ ನಕಲಿ ನಂದಿನಿ ತುಪ್ಪ ತಯಾರಿಕಾ ಗೋಡೌನ್ ಮೇಲೆ ದಾಳಿ ನಡೆಸಿದಾಗ ಪ್ರಮುಖ ಆರೋಪಿ ಮುರುಗೇಶ್ ಮತ್ತು ಪತ್ನಿ ಅಶ್ವಿನಿ ಸ್ಥಳದಲ್ಲಿಯೇ ಇದ್ದರು, ಅವರೇ ಅದರ ರೂವಾರಿಗಳು ಎಂದು ತಿಳಿಯದ ಕಾರಣ ಅವರನ್ನು ಬಂಧಿಸಲು ಸಾಧ್ಯವಾಗಿಲ್ಲ ಎಂದು ಪ್ರಕರಣದ ತನಿಖಾಧಿಕಾರಿ ಶಶಿಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಮೈಸೂರು: ನಕಲಿ ನಂದಿನಿ ತುಪ್ಪ ಘಟಕದ ಮೇಲೆ ದಾಳಿ!
ಈಗ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಸಂಘಟನೆಯವರನ್ನು ನೋಡುತ್ತಿದ್ದಂತೆ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಆರೋಪಿಗಳು ವಾಸ ಮಾಡುತ್ತಿದ್ದರೆನ್ನಲಾದ ಶ್ರೀರಾಂಪುರದ ಭ್ರಮರಾಂಭ ಕಲ್ಯಾಣ ಮಂಟಪದ ಬಳಿಯ ಮನೆ ಹಾಗೂ ಮಹದೇವಪುರದಲ್ಲಿನ ಮನೆಯಲ್ಲಿ ಶೋಧ ಮಾಡಿದ್ದು, ಆರೋಪಿಗಳು ವಾರಕ್ಕೊಮ್ಮೆ ಬಂದು ಹೋಗುತ್ತಿದ್ದರು ಎಂಬುದು ನೆರೆಹೊರೆಯವರಿಂದ ತಿಳಿದುಬಂದಿದೆ.
ಆರೋಪಿಗಳು ಸಿಕ್ಕಿದ ಬಳಿಕವಷ್ಟೇ ನಕಲಿ ತುಪ್ಪ ತಯಾರಿಸುವುದರ ಹಿಂದೆ ಯಾರ ಕೈವಾಡವಿತ್ತು? ಯಾರಿಗೆ ಮಾರಾಟ ಮಾಡುತ್ತಿದ್ದರು? ಹಾಗೂ ಇನ್ನೂ ಬೇರೆ ಕಡೆ ಎಲ್ಲೆಲ್ಲಿ ಗೋದಾಮು ಮಾಡಿದ್ದಾರೆ ಎಂಬ ಮಾಹಿತಿ ತಿಳಿದು ಬರಬೇಕಿದೆ.
ಅಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರ ಮಾರ್ಗದರ್ಶನದಲ್ಲಿ ನಾಲ್ವರು ಸಹಾಯಕ ನಿರ್ದೇಶಕರನ್ನೊಳಗೊಂಡ ಅಧಿಕಾರಿಗಳು ಪ್ರತ್ಯೇಕ ತನಿಖೆ ನಡೆಸುತ್ತಿದ್ದು, ತುಪ್ಪ ತಯಾರಿಕೆಗೆ ಬೇಕಾದ ನಕಲಿ ತುಪ್ಪ ಎಲ್ಲಿಗೆ ಸರಬರಾಜು ಆಗುತ್ತಿತ್ತು? ನಕಲಿ ತುಪ್ಪ ಬಳಕೆಗೆ ಯೋಗ್ಯವಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಮೈಸೂರು: ನಕಲಿ ನಂದಿನಿ ತುಪ್ಪದ ಘಟಕದ ಮೇಲಿನ ದಾಳಿ ಕುರಿತು ಅಧಿಕಾರಿಗಳು ಹೇಳಿದ್ದೇನು?