ಮೈಸೂರು: ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತರು ಕೇವಲ ಪಂಜಾಬಿಗಳು ಮಾತ್ರ. ಅವರು ಇಡೀ ದೇಶದ ರೈತರನ್ನು ಪ್ರತಿನಿಧಿಸಿದಂತೆ ಆಗಲ್ಲ ಎನ್ನುವ ಮೂಲಕ ಕೇಂದ್ರದ ಕೃಷಿ ಕಾಯ್ದೆಗೆ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಬೆಂಬಲ ಸೂಚಿಸಿದ್ದಾರೆ.
ಆರ್ಎಸ್ಎಸ್ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಷ್ಟಕ್ಕೂ ಕೃಷಿ ಕಾಯ್ದೆಗಳಲ್ಲಿ ರೈತರಿಗೆ ಅನುಕೂಲಕರ ಅಂಶಗಳೇ ಇವೆ. ರೈತ ಬೆಳೆದ ಬೆಳೆಯನ್ನು ಎಪಿಎಂಸಿಯಲ್ಲೇ ಮಾರಬೇಕೆಂಬುದಕ್ಕೆ ರೈತರೇ ವಿರೋಧ ಮಾಡ್ತಾರೆ. ರೈತರ ಜಮೀನಿಗೆ ಹೋಗಿ ಖಾಸಗಿಯವರು ಎಪಿಎಂಸಿಗಿಂತ ಜಾಸ್ತಿ ಬೆಲೆ ಕೊಟ್ಟು ಖರೀದಿ ಮಾಡ್ತಾರೆ. ಆ ತಕ್ಷಣವೇ ರೈತರಿಗೆ ಹಣ ಸಿಗುತ್ತೆ, ಹಣಕ್ಕಾಗಿ ಎಪಿಎಂಸಿ ಅಲೆದಾಟ ತಪ್ಪುತ್ತೆ. ಆದರೆ, ಈ ಹೋರಾಟದ ಹಿಂದೆ ಕಾಂಗ್ರೆಸ್, ಕಮ್ಯೂನಿಸ್ಟರ ಕೈವಾಡವಿದೆ ಎಂದರು.
ಪ್ರಧಾನಿ ಮೋದಿಯವರ ಜನಪ್ರಿಯತೆಯನ್ನು ಅವರಿಗೆ ಸಹಿಸಲು ಆಗುತ್ತಿಲ್ಲ. ಮೋದಿಯವರು ವಿಶ್ವದಲ್ಲೇ ಸಮರ್ಥ ನಾಯಕ ಅಂತಾ ಬೇರೆ ದೇಶದ ನಾಯಕರೇ ಹೇಳ್ತಿದ್ದಾರೆ. ಕೊರೊನಾ ಸಂದರ್ಭದಲ್ಲಂತೂ ಪಾಶ್ಚಾತ್ಯ ದೇಶಗಳಿಗಿಂತ ಸಮರ್ಥವಾಗಿ ಪರಿಸ್ಥಿತಿ ನಿಭಾಯಿಸಿದ್ದಾರೆ ಎಂದು ಹೇಳಿದರು.
ಕರ್ನಾಟಕದಲ್ಲಿ ಗೋ ಹತ್ಯೆ ಜಾರಿ ಸಮರ್ಥನೆ:
ಗೋವಿಗೂ ನಮಗೂ ಇರೋದು ತಾಯಿ ಮಕ್ಕಳ ಸಂಬಂಧ. ಗೋವು ಅಹಿಂಸೆಯ ಪ್ರತೀಕ. ಚಿಕ್ಕಂದಿನಿಂದ ಗೋವಿನ ಹಾಲು ಕುಡಿದೇ ಎಲ್ಲರೂ ಬೆಳೆದಿದ್ದೇವೆ. ವಯಸ್ಸಾದ ಮೇಲೆ ತಾಯಿಯನ್ನು ನಿರುಪಯುಕ್ತ ಅಂತ ಹೇಳಲಾಗುವುದೇ? ಎಂದು ಅವರು ಕೇಳಿದರು.
ಓದಿ: ಮೈಸೂರಿಗೆ ಭೇಟಿ ನೀಡಿದ ರಾಜ್ಯ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್
ಗೋವು ಹಾಲು ಕೊಡುವುದನ್ನು ನಿಲ್ಲಿಸಿದ ಮೇಲೂ ಗೊಬ್ಬರ ಕೊಡುತ್ತದೆ. ನಾವೀಗ ಕೆಮಿಕಲ್‌ಯುಕ್ತ ಆಹಾರವನ್ನು ತಿನ್ನುತ್ತಿರುವ ಕಾರಣದಿಂದಲೇ ಕ್ಯಾನ್ಸರ್ ಬರ್ತಿದೆ. ಗೋವುಗಳನ್ನು ರೈತರು ಗೊಬ್ಬರದ ಸಲುವಾಗಿಯಾದ್ರೂ ಸಲಹಬೇಕು. ಗೋವನ್ನು ಟೀಕಿಸುವವರು ಮೂಲಭೂತ ಜ್ಞಾನ ಇಲ್ಲದವರು ಎಂದು ಕುಟುಕಿದರು.
ಹನುಮಂತ ಗುಲಾಮಗಿರಿಯ ಸಂಕೇತ ಎಂದು ಪ್ರೊ. ಮಹೇಶ್ಚಂದ್ರಗುರು, ಹನುಮ ಜಯಂತಿಯನ್ನೇ ಪ್ರಶ್ನೆ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯರ ಪ್ರಶ್ನೆಗೆ, ಇದು ನಾನು ಉತ್ತರ ಕೊಡಲು ಲಾಯಕ್ಕೇ ಇಲ್ಲದ ವಿಚಾರ. ಹಾಗಾಗಿ ಅಂತಹವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು.