ಮೈಸೂರು: ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಮುಖ್ಯವಾಗಿ ಉತ್ತರ ಕರ್ನಾಟಕದ ರೈತರ ಸಮಸ್ಯೆಗಳು, ಬರಗಾಲ ಹಾಗೂ ಸಕ್ಕರೆ ಕಾರ್ಖಾನೆಗಳು ರೈತರಿಗೆ ಮಾಡುತ್ತಿರುವ ಮೋಸದ ಬಗ್ಗೆ ಚರ್ಚೆ ಮಾಡಬೇಕು. ಜೊತೆಗೆ ರಾಜ್ಯದಲ್ಲಿ ಭೀಕರ ಬರಗಾಲ ಇದ್ದು, ಈ ಹಿನ್ನೆಲೆಯಲ್ಲಿ ರೈತರ ಸಾಲ ಮನ್ನಾ ಮಾಡಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದರು.
ಈಟಿವಿ ಭಾರತಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, "ಡಿಸೆಂಬರ್ 4 ರಿಂದ ಬೆಳಗಾವಿಯಲ್ಲಿ ಚಳಿಗಾಲದ ವಿಶೇಷ ಅಧಿವೇಶನ ನಡೆಯಲಿದೆ. ಈ ಅಧಿವೇಶನದಲ್ಲಿ ಮುಖ್ಯವಾಗಿ ಉತ್ತರ ಕರ್ನಾಟಕದ ರೈತರ ಜ್ವಲಂತ ಸಮಸ್ಯೆಗಳನ್ನು ಚರ್ಚೆ ಮಾಡಬೇಕು. ರಾಜ್ಯದಲ್ಲಿ ಬರಗಾಲ ಇದೆ, ಕಬ್ಬು ಬೆಳೆಗಾರರ ಸಮಸ್ಯೆ ಇದೆ. ಬರಗಾಲದ ಹಿನ್ನೆಲೆಯಲ್ಲಿ ರೈತರಿಗೆ 2000 ಘೋಷಣೆ ಮಾಡಿದ್ದಾರೆ, ಇದು ಸರಿಯಲ್ಲ ಈ ಬಗ್ಗೆಯೂ ಚರ್ಚೆ ಮಾಡಬೇಕು. ಅದನ್ನು ಬಿಟ್ಟು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಅಧಿವೇಶನ ನಡೆಸುತ್ತಾರೆ. ಇಲ್ಲಿ ರೈತರು ಮತ್ತು ಬರಗಾಲದ ಬಗ್ಗೆ ಚರ್ಚೆಯಾಗಬೇಕು. ಜೊತೆಗೆ ಸಕ್ಕರೆ ಕಾರ್ಖಾನೆಗಳು ಕಬ್ಬಿನ ತೂಕ, ಬೆಲೆ ನಿಗದಿ ಸೇರಿದಂತೆ ಎಲ್ಲ ವಿಚಾರಗಳಲ್ಲೂ ಮೋಸ ಮಾಡುತ್ತಿವೆ. ಈ ಬಗ್ಗೆ ಚರ್ಚೆ ಮಾಡಬೇಕು" ಎಂದು ಒತ್ತಾಯಿಸಿದರು.
"ಕೇಂದ್ರ ಸರ್ಕಾರ ಕೊರೊನಾ ಸಂಕಷ್ಟದಲ್ಲಿ ಕೈಗಾರಿಕೆಗಳಿಗೆ ಹಾಗೂ ಐಟಿ ಕಂಪನಿಗಳಿಗೆ 12 ಲಕ್ಷ ಕೋಟಿ ಸಾಲ ಮನ್ನಾ ಮಾಡಿತ್ತು. ಅದೇ ರೀತಿ ರೈತ ಸಮುದಾಯ ಈಗ ಸಂಕಷ್ಟದಲ್ಲಿದೆ. ಆದ್ದರಿಂದ ರೈತರ ಎಲ್ಲ ಸಾಲವನ್ನು ಮನ್ನಾ ಮಾಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು. ಉತ್ತರ ಕರ್ನಾಟಕದ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದ್ದು, ಈ ಬಾರಿ ಮೋಜಿಗಾಗಿ, ಪ್ರತಿಭಟನೆಗಾಗಿ ಅಧಿವೇಶನ ಮಾಡಬಾರದು. ರಾಜ್ಯ ಸರ್ಕಾರ ಬರಗಾಲ ಘೋಷಣೆ ಮಾಡಿ ಎರಡು ತಿಂಗಳಾಗಿದೆ. ನಿನ್ನೆ ಎಕರೆಗೆ 2000 ರೂ ನಂತೆ ರೈತರಿಗೆ ಪರಿಹಾರ ಘೋಷಣೆ ಮಾಡಿದ್ದಾರೆ. ಇದು ಯಾವುದಕ್ಕೂ ಸಾಲೋದಿಲ್ಲ" ಎಂದರು.
"ಎರಡು ಸಾವಿರ ರೂಪಾಯಿಯನ್ನು ರೈತರಿಗೆ ಭಿಕ್ಷುಕರಂತೆ ಕೊಡುವುದು ಸರಿಯಲ್ಲ. ಕೂಡಲೇ ಕನಿಷ್ಠ ಒಂದು ಎಕರೆಗೆ 25000 ರೂ ಬೆಳೆ ಪರಿಹಾರ ನೀಡಬೇಕು. ಪುಕ್ಕಟ್ಟೆ ಯೋಜನೆಗೆ ಬೇಕಾಬಿಟ್ಟಿ ಖರ್ಚು ಮಾಡುವ ನೀವು ರೈತರಿಗೆ ಕೊಡಲು ಯಾಕೆ ಹಿಂದೇಟು ಹಾಕುತ್ತೀರಿ?. ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡಬೇಕು. ಜೊತೆಗೆ ರೈತರ ಸಮಸ್ಯೆಗಳನ್ನು ಅಧಿವೇಶನದಲ್ಲಿ ಚರ್ಚೆ ಮಾಡಬೇಕು" ಎಂದು ಕುರುಬೂರು ಶಾಂತಕುಮಾರ್ ಆಗ್ರಹಿಸಿದರು.
ಇದನ್ನೂ ಓದಿ: ಅರ್ಜಿ ತಿರಸ್ಕೃತಗೊಂಡರೆ ಎಸ್‌ಎಂಎಸ್ ಮೂಲಕ ಮೇಲ್ಮನವಿಗೆ ಅವಕಾಶ : ಸಕಾಲ ಮಿಷನ್