ಮೈಸೂರು: ಇಲ್ಲಿನ ಸಿಎಫ್ಟಿಆರ್ಐ ಆವರಣದಲ್ಲಿ ಆಯೋಜಿಸಿರುವ ಅಂತರರಾಷ್ಟ್ರೀಯ ಆಹಾರ ಸಮ್ಮೇಳನದಲ್ಲಿ ತಿರುವನಂತಪುರಂನ ಸಿಎಸ್ಐಆರ್ ಸಂಸ್ಥೆ (ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಇಂಟರ್ ಡಿಸಿಪ್ಲಿನರಿ ಸೈನ್ಸ್ ಆ್ಯಂಡ್ ಟೆಕ್ನಾಲಜಿ) ಅಭಿವೃದ್ಧಿಪಡಿಸಿರುವ ಪ್ಲಾಂಟ್ ಬೇಸ್‌ಡ್ ಲೆದರ್ ಜಾಕೆಟ್, ಶೂ, ಬ್ಯಾಗ್ ಸೇರಿದಂತೆ ಇತರೆ ಪರಿಸರಸ್ನೇಹಿ ವಸ್ತುಗಳನ್ನು ಪ್ರದರ್ಶಕ್ಕಿಡಲಾಗಿದೆ.
ವಿಜ್ಞಾನಿ ವೆಂಕಟೇಶ್.ಆರ್ ಮಾತನಾಡಿ, "ನಾವು ಲೆದರ್ಗೆ ಪರ್ಯಾಯವಾಗಿ ವೀಗನ್ ಪ್ಲಾಂಟ್ ಬೇಸ್‌ಡ್ ಜಾಕೆಟ್ ತಯಾರಿ ಮಾಡಿದ್ದೇವೆ. ಲೆದರ್ನಿಂದ ತಯಾರಿಸಿದ ವಸ್ತುಗಳು ಪರಿಸರಸ್ನೇಹಿ ಅಲ್ಲ. ನಾವು ತಯಾರಿಸಿರುವ ವೀಗನ್ ಪ್ಲಾಂಟ್ ಬೇಸ್‌ಡ್ ಜಾಕೆಟ್ ಪರಿಸರಸ್ನೇಹಿಯಾಗಿದ್ದು, ಲೆದರ್ಗೆ ಹೋಲಿಕೆ ಮಾಡಿದರೆ ಇದರ ತಯಾರಿಕೆಯಲ್ಲಿ ಶೇ 30ರಿಂದ 50 ರಟ್ಟು ರಾಸಾಯನಿಕಗಳನ್ನು ಕಡಿಮೆ ಬಳಕೆ ಮಾಡಿದ್ದೇವೆ. ಪ್ಲಾಂಟ್ ಬೇಸ್‌ಡ್ ಜಾಕೆಟ್ ತಯಾರಿ ತಂತ್ರಜ್ಞಾನವನ್ನು ಬೇರೆ ಬೇರೆ ಸಂಸ್ಥೆಗಳ ಜತೆ ಹಂಚಿಕೊಂಡಿದ್ದೇವೆ. ಮೂರು ವರ್ಷ ಬಾಳಿಕೆ ಬರುವ ಪರಿಸರಸ್ನೇಹಿ ಜಾಕೆಟ್ ಕೆಲವೇ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ತಿಳಿಸಿದರು.
ವೀಗನ್ ಪ್ಲಾಂಟ್ ಬೇಸ್‌ಡ್ ಜಾಕೆಟ್, ಬ್ಯಾಗ್, ಶೂ, ಪರ್ಸ್ಗಳನ್ನು ತಯಾರಿಸಿದ್ದೇವೆ. ಇವೆಲ್ಲವನ್ನು ಕೃಷಿ ತ್ಯಾಜ್ಯಗಳಾದ ಕಬ್ಬಿನ ಸಿಪ್ಪೆ, ಅಕ್ಕಿ, ಗೋದಿಯ ತ್ಯಾಜ್ಯ ಬಳಸಿ ಸಿದ್ಧಪಡಿಸಿದ್ದೇವೆ. ಇವು ಬೇಗ ಭೂಮಿಯಲ್ಲಿ ಕೊಳೆಯುವುದರಿಂದ ಪರಿಸರಸ್ನೇಹಿಯಾಗಿವೆ ಎಂದರು.
ತಿರುವನಂತಪುರಂನ ಸಿಎಸ್ಐಆರ್ ವಿಜ್ಞಾನಿ ಆಂಜನೇಲು ಮಾತನಾಡಿ, "ಜೋಳ, ಅಕ್ಕಿ, ಕಬ್ಬಿನ ಸಿಪ್ಪೆ, ಭತ್ತದ ಮತ್ತು ಗೋಧಿ ಹುಲ್ಲು, ಮಾವಿನ ತ್ಯಾಜ್ಯವನ್ನು ಪರಿಸರಸ್ನೇಹಿ ಲೆದರ್ಶೀಟ್ಗಳಾಗಿ ಪರಿವರ್ತಿಸಲಾಗಿದೆ. ಇದು ಭೂಮಿಯಲ್ಲಿ ಬೇಗ ಕೊಳೆಯುತ್ತದೆ ಮತ್ತು ಇದನ್ನು ತಯಾರಿಸುವಾಗ ಕಡಿಮೆ ತ್ಯಾಜ್ಯ ಉತ್ಪಾದನೆಯಾಗುತ್ತದೆ. ವೀಗನ್ ಪ್ಲಾಂಟ್ ಬೇಸ್‌ಡ್ ವಸ್ತುಗಳನ್ನು ತಯಾರಿಸಲು ಕಡಿಮೆ ಬಂಡವಾಳದ ಅಗತ್ಯ ಇರುವುದರಿಂದ ರೈತರು ಮತ್ತು MSME ಕಂಪನಿಗಳು ಬಂಡವಾಳ ಹೂಡಿಕೆ ಮಾಡಬಹುದು. ಕೃಷಿ ತ್ಯಾಜ್ಯಗಳಿಂದ ತಯಾರಿಸಿದ ಲೆದರ್ ಶೀಟ್ಗಳನ್ನು ಜವಳಿ, ಫ್ಯಾಷನ್ ಉದ್ಯಮದಲ್ಲಿ ಮತ್ತು ಮೋಟಾರು ವಾಹನಗಳ ಕವರ್ಗಳನ್ನು ತಯಾರಿಸಲು ಬಳಸಬಹುದು ಎಂದು ಮಾಹಿತಿ ನೀಡಿದರು.
ಉಪಯೋಗಗಳೇನು?: ವೀಗನ್ ಪ್ಲಾಂಟ್ ಬೇಸ್‌ಡ್ ವಸ್ತುಗಳಿಂದ ಕಡಿಮೆ ಕಾರ್ಬನ್ ಡೈ ಆಕ್ಸೈಡ್ ಉತ್ಪಾದನೆಯಾಗುತ್ತದೆ. ಇವುಗಳನ್ನು ತಯಾರಿಸಲು ಕಡಿಮೆ ಪ್ರಮಾಣದಲ್ಲಿ ನೀರು ಬಳಕೆಯಾಗುತ್ತದೆ ಮತ್ತು ಲೆದರ್‌ಶೀಟ್‌ಗಳ ಬೆಲೆಗೆ ಹೋಲಿಸಿದರೆ ಕೃಷಿ ತ್ಯಾಜ್ಯಗಳಿಂದ ತಯಾರಿಸಿದ ಲೆದರ್‌ಶೀಟ್ ತುಂಬಾ ಅಗ್ಗವಾಗಿದೆ. ಪ್ರಮುಖವಾಗಿ ರೈತರು ತಮ್ಮ ಕೃಷಿ ತ್ಯಾಜ್ಯದಿಂದ ಆದಾಯವನ್ನು ಪಡೆಯಬಹುದು. ನಾವು ಶೂ, ಜಾಕೆಟ್, ಕಾರಿನ ಕವರ್ಗಳು, ಪರ್ಸ್ಗಳನ್ನು ತಯಾರಿಸುತ್ತಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಕೃಷಿ ಕ್ಷೇತ್ರದ ಬೆಳವಣಿಗೆಗೆ ಇಸ್ರೋ ನೆರವು: ಡಾ.ಎಸ್.ಸೋಮನಾಥ್