ಮೈಸೂರು: ನೆರೆ ಹಾವಳಿ ಸಂದರ್ಭದಲ್ಲಿ ಗಂಡನನ್ನು ಕಳೆದುಕೊಂಡಿದ್ದ ಮಹಿಳೆಗೆ ನೀಡಲಾಗಿದ್ದ ಪರಿಹಾರ ಚೆಕ್ನ್ನು ಅಧಿಕಾರಿಗಳು ವಾಪಸ್ ಪಡೆದ ಘಟನೆ ನಂಜನಗೂಡಿನಲ್ಲಿ ನಡೆದಿತ್ತು. ಈ ಕುರಿತು ಈಟಿವಿ ಭಾರತ್ನಲ್ಲಿ ವರದಿ ಪ್ರಸಾರವಾಗಿದ್ದ ವರದಿ ಸದ್ದು ಮಾಡಿತ್ತು. ವರದಿಗೆ ಸ್ಪಂದಿಸಿರುವ ಸ್ಥಳೀಯ ಶಾಸಕರು ಸಂತ್ರಸ್ತೆಗೆ ಪುನಃ ಚೆಕ್ ಕೊಡಿಸುವ ವ್ಯವಸ್ಥೆ ಮಾಡಿದ್ದಾರೆ.
ಪ್ರವಾಹದಲ್ಲಿ ತನ್ನ ಗಂಡನನ್ನು ಕಳೆದುಕೊಂಡು ಗಂಜಿ ಕೇಂದ್ರದಲ್ಲಿದ್ದ ನಂಜನಗೂಡಿನ ಚಂದ್ರಮ್ಮ ಎಂಬುವರಿಗೆ, 5 ಲಕ್ಷ ರೂಪಾಯಿ ಮೊತ್ತದ ಪರಿಹಾರ ಚೆಕ್ನ್ನು ಸರ್ಕಾರದ ಪರವಾಗಿ ನೀಡಲಾಗಿತ್ತು. ಆದರೆ ಚೆಕ್ ನೀಡಿದ್ದ ಅಧಿಕಾರಿಗಳು ಮಾರನೇ ದಿನವೇ ಅದನ್ನು ವಾಪಸ್ ಪಡೆದುಕೊಂಡು ಹೋಗಿದ್ದರು. ಇದರಿಂದ ಆತಂಕಗೊಂಡಿದ್ದ ಚಂದ್ರಮ್ಮ, ಕಂಡ ಕಂಡವರ ಬಳಿ ತನಗೆ ನೀಡಿದ್ದ ಚೆಕ್ ವಾಪಸ್ ಪಡೆದ ಅಧಿಕಾರಿಗಳು, 2 ತಿಂಗಳಾದರೂ ಹಿಂತಿರುಗಿಸಿಲ್ಲವೆಂದು ತಮ್ಮ ಅಳಲನ್ನು ತೋಡಿಕೊಂಡಿದ್ದರು. ಈ ಬಗ್ಗೆ ಅಕ್ಟೋಬರ್ 13ರಂದು ಈಟಿವಿ ಭಾರತ್ ನಲ್ಲಿ ವರದಿ ಪ್ರಸಾರವಾಗಿತ್ತು.
ಹೆಚ್ಚಿನ ಓದಿಗಾಗಿ: ನೀಡಿದ್ದ 5 ಲಕ್ಷ ಪರಿಹಾರದ ಚೆಕ್ ವಾಪಸ್ ಪಡೆದ ಅಧಿಕಾರಿಗಳು: ಸಂಕಷ್ಟದಲ್ಲಿ ಮಹಿಳೆ
ಈ ವರದಿಯನ್ನು ಗಮನಿಸಿದ್ದ ಶಾಸಕ ಹರ್ಷವರ್ಧನ್ ಅವರು, ತಕ್ಷಣ ಈ ಬಗ್ಗೆ ಸ್ಥಳೀಯ ತಹಶಿಲ್ದಾರ್ ಮಹೇಶ್ ಕುಮಾರ್ರಿಂದ ಮಾಹಿತಿ ಪಡೆದರು. ಅಲ್ಲದೆ, ಚಂದ್ರಮ್ಮನಿಗೆ ಬ್ಯಾಂಕ್ ಖಾತೆ ಮಾಡಿಸಲು ಬೇಕಾದ ಎಲ್ಲಾ ದಾಖಲಾತಿಗಳನ್ನು ಒದಗಿಸಿ, ಅವರಿಗೆ ಬ್ಯಾಂಕ್ ಖಾತೆಯಾದ ನಂತರ ಚೆಕ್ ಹಣವನ್ನು ಆ ಖಾತೆಗೆ ವಾಪಸ್ ನೀಡುವಂತೆ ಸೂಚಿಸಿದ್ದಾರೆ.