ಮೈಸೂರು: ತೇಜಸ್ವಿ ಸೂರ್ಯ, ಚಕ್ರವರ್ತಿ ಸೂಲಿಬೆಲೆಯವರು ದೇಶಾದ್ಯಂತ ಜನ ಜಾಗೃತಿ ಮೂಡಿಸುತ್ತಿದ್ದಾರೆ. ಅಂಥವರ ವಿರುದ್ಧ ಹಗುರವಾಗಿ ಮಾತನಾಡಿದ ಹೆಚ್ಡಿಕೆಗೆ ಭಾಷೆ ಮೇಲೆ ಹಿಡಿತವಿರಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಮೈಸೂರಿನ ಸರ್ಕಾರಿ ಅತಿಥಿಗೃಹದಲ್ಲಿ ಹೆಚ್ಡಿಕೆ ಟ್ವೀಟ್ ಕುರಿತು ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಅಧಿಕಾರದಿಂದ ದೂರ ಉಳಿದ ಬಳಿಕ ಅವರಿಗೆ ಉದ್ಯೋಗವಿಲ್ಲ. ಕುಮಾರಸ್ವಾಮಿ ಸಿನಿಮಾ ನೋಡಿಕೊಂಡು ಇರುವುದು ಒಳ್ಳೆಯದ್ದು ಎಂದು ಟೀಕಿಸಿದರು.
ಇನ್ನು ಇದೇ ವೇಳೆ ಎಸ್‌ಡಿಪಿಐ ಹಾಗೂ ಪಿಎಫ್‌ಐ ನಿಷೇಧದ ಕುರಿತು ಮಾತನಾಡಿ, ಕೇರಳದಿಂದ ಬಂದು ಪಾಕಿಸ್ತಾನಕ್ಕೆ ಜೈ ಎಂದು ಘೋಷಣೆ ಕೂಗಿದ್ದನ್ನು ನಾವು ನೋಡಿದ್ದೇವೆ. ಅಷ್ಟೇ ಅಲ್ಲದೆ, ಕೊಲೆ ಮಾಡಿದ ಪ್ರಕರಣಗಳೂ ನಮ್ಮ ಮುಂದಿವೆ. ಇವೆಲ್ಲ ಕಾರಣಗಳನ್ನು ಮುಂದಿಟ್ಟುಕೊಂಡು ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳನ್ನು ನಿಷೇಧಿಸಲು ನಿರ್ಧರಿಸಲಾಗಿದೆ. ಎಸ್‌ಡಿಪಿಐ ಹಾಗೂ ಪಿಎಫ್‌ಐ ಭಯೋತ್ಪಾದನಾ ಸಂಘಟನೆಗಳು. ಅವುಗಳ ಚಟುವಟಿಕೆ ಏನು ಎಂಬುದು ಮೈಸೂರು, ಶಿವಮೊಗ್ಗದವರಿಗೂ ಅನುಭವ ಆಗಿದೆ. ಈ ಸಂಘಟನೆಗಳನ್ನು ನಿಷೇಧ ಮಾಡಿಯೇ ಮಾಡುತ್ತೇವೆ ಎಂದು ತಿಳಿಸಿದರು.
ಇದೇ ವೇಳೆ ಸಂಪುಟ ವಿಸ್ತರಣೆ ಕುರಿತು ಮಾತನಾಡಿ, ಸಚಿವ ಸ್ಥಾನ ಆಕಾಂಕ್ಷಿಗಳ ಋಣ ನಮ್ಮ ಮೇಲಿದೆ. ಅದನ್ನು ತೀರಿಸುವುದು ನಮ್ಮ ಕರ್ತವ್ಯ. ಅವರ ಋಣ ತೀರಿಸುವ ಕೆಲಸ ನಾವು ಮಾಡುತ್ತೇವೆ. ಅವರಿಂದಲೇ ನಮ್ಮ ಸರ್ಕಾರ ಬಂದಿದೆ. ಇನ್ನು ಎರಡು ದಿನದಲ್ಲಿ ಸಂಪುಟ ವಿಸ್ತರಣೆ ಆಗಲಿದೆ ಎಂದರು.