ಮೈಸೂರು: "ಇಸ್ರೇಲ್-ಪ್ಯಾಲೆಸ್ಟೈನ್ ನಡುವೆ ಸಂಘರ್ಷ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿವಿಧೆಡೆ ಪರ -ವಿರೋಧ ಪ್ರತಿಭಟನೆಗಳು ನಡೆಯುತ್ತಿವೆ. ಅದರಂತೆ ಮೈಸೂರು ನಗರದಲ್ಲಿ ಪ್ರತಿಭಟನೆ ನಡೆಸಲು ಅನುಮತಿ ಕೋರಿ ಎಸ್ಡಿಪಿಐ ಸಂಘಟನೆಯವರು ಮನವಿ ಮಾಡಿದ್ದರು. ಅವರ ಮನವಿಯನ್ನು ನಾವು ತಿರಸ್ಕರಿಸಿದ್ದೇವೆ" ಎಂದು ಮೈಸೂರು ನಗರ ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ತಿಳಿಸಿದರು. ಮೈಸೂರು ನಗರದ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
"ಸಾಮಾಜಿಕ ಮಾಧ್ಯಮಗಳಲ್ಲಿ 3 ಗಂಟೆಗೆ ಸಾಮೂಹಿಕ ಪ್ರತಿಭಟನೆಗೆ ಬನ್ನಿ ಎಂಬ ಸುದ್ದಿ ಹರಿದಾಡುತ್ತಿದೆ. ಹೀಗಾಗಿ ಇವತ್ತು ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಇಸ್ರೇಲ್ - ಪ್ಯಾಲೆಸ್ಟೈನ್ ವಿಚಾರವಾಗಿ ಪರ-ವಿರೋಧವಾಗಿ ಯಾವುದೇ ಸಭೆ -ಸಮಾರಂಭ, ರ‍್ಯಾಲಿ, ಪ್ರತಿಭಟನೆ ನಡೆಸುವುದನ್ನು ನಿಷೇಧಿಸಿ ಕಲಂ 144 ಸೆಕ್ಷನ್ ಜಾರಿ ಮಾಡಲಾಗಿದೆ. ಮಿಲಾದ್ ಪಾರ್ಕ್ ಹಾಗೂ ಮೈಸೂರು ನಗರ ವ್ಯಾಪ್ತಿಯಲ್ಲಿ ಈ ವಿಷಯ ಸಂಬಂಧ ಪರ-ವಿರೋಧ ಘೋಷನೆ ಕೂಗುವುದು, ಪ್ರತಿಭಟನೆ ಮಾಡುವುದು, ಗುಂಪು ಸೇರಿ ಚರ್ಚಿಸುವುದು ಮತ್ತು ಈ ವಿಚಾರವಾಗಿ ನೀಡುವ ಹೇಳಿಕೆಗಳನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದನ್ನು ನಿಷೇಧಿಸಲಾಗಿದೆ" ಎಂದರು.
"ಯಾರಾದರೂ ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಪ್ರತಿಭಟನೆ ನಡೆಸಲು ಪೊಲೀಸರು ಅನುಮತಿ ನೀಡಿದ್ದಾರೆಂದು ಕೆಲವರು ಸುಳ್ಳು ಸುದ್ದಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡುತ್ತಿದ್ದಾರೆ. ಈ ರೀತಿ ಮಾಡಿದ 4 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ" ಎಂದರು.