ಮೈಸೂರು: ದಸರಾ ಜಂಬೂಸವಾರಿ ಮೆರವಣಿಯ ಉದ್ಘಾಟನೆಗೆ ಕೆಲವೇ ಕ್ಷಣಗಳು ಬಾಕಿ ಇದ್ದು, ಚಿನ್ನದ ಅಂಬಾರಿ ಹೊತ್ತು ಸಾಗುವ ಗಜಪಡೆ ವಿವಿಧ ಬಣ್ಣ ಹಾಗೂ ಆಭರಣಗಳಿಂದ ಅಲಂಕಾರಗೊಂಡಿವೆ.
ಕ್ಯಾಪ್ಟನ್ ಅಭಿಮನ್ಯು ಸೇರಿದಂತೆ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆರು ಆನೆಗಳಿಗೆ, ಮಾವುತರು ಹಾಗೂ ಕಾವಾಡಿಗಳು ನಮ್ದಾ, ಗಾದಿ ಚಾಪು ಜೂಲ ಕಟ್ಟಿ ಶೃಂಗರಿಸಿದರು. ಬಳಿಕ ಆನೆಗಳಿಗೆ ಸಿಂಗೋಟಿ, ಹಣೆಪಟ್ಟಿ, ಅರಳಿಸರ, ಮಾವಿನಕಾಯಿ ಸರ, ಬೇರ್ ರೂಪ್ ,ಕತ್ತು ಘಂಟೆ, ಕಾಲಿನ ಗಂಟೆ, ಕಾಲು ಡೂಬು ಕಟ್ಟಿ ಗಜಪಡೆಗೆ ಸಿಬ್ಬಂದಿ ಸಿಂಗಾರ ಮಾಡಿದ್ದು, ಕೆಲವೇ ಕ್ಷಣಗಳಲ್ಲಿ ಚಿನ್ನದ ಅಂಬಾರಿ ಕಟ್ಟುವ ಸ್ಥಳಕ್ಕೆ ತೆರಳಲಿವೆ.
ನಂದಿ ಧ್ವಜ ಹೊತ್ತು ತಂದ ಉಡಿಗಾಲ ಮಹದೇವಪ್ಪ ಮತ್ತು ತಂಡ ನಂದಿ ಕಂಬವನ್ನು ಹೊತ್ತು ಕುಣಿಯಲಿದೆ. ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಬಳಿ ನಂದಿ ಕಂಬಕ್ಕೆ ಸಂಜೆ 4.26 ರಿಂದ 4.36 ರ ಮೀನ ಲಗ್ನದಲ್ಲಿ ಪೂಜೆ ಸಲ್ಲಿಸಿ, ಜಂಬೂಸವಾರಿ ಮೆರವಣಿಗೆಗೆ ಚಾಲನೆ ಸಿಗಲಿದೆ.
ಇದನ್ನೂ ಓದಿ: ಜಗತ್ಪ್ರಸಿದ್ಧ ಜಂಬೂಸವಾರಿಗೆ ಕೆಲವೇ ಗಂಟೆಗಳು ಬಾಕಿ; ಗಜಪಡೆಗೆ ವಿಶೇಷ ಅಲಂಕಾರ