ಮೈಸೂರು: ಪಂಚ ರಾಜ್ಯ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಚುಕ್ಕಾಣಿ ಹಿಡಿದಿರುವುದಕ್ಕೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಚುನಾವಣೆಯಲ್ಲಿ ನಾವು ಸಮಿಫೈನಲ್ನಲ್ಲಿ ಭರ್ಜರಿ ಜಯ ಸಾಧಿಸಿದ್ದೇವೆ ಎಂದು ಬಣ್ಣಿಸಿದ್ದಾರೆ.
ವಿಜಯನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಫೈನಲ್ ಆಗಿ 2024ರ ಲೋಕಸಭಾ ಚುನಾವಣೆಯನ್ನೂ ಗೆಲ್ಲುತ್ತೇವೆ. ಮಧ್ಯದಲ್ಲಿ ಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೂ ಕೂಡಾ ಜಯಭೇರಿ ಬಾರಿಸುತ್ತೇವೆ. ಜನ ಮತ್ತೊಮ್ಮೆ ಬಿಜೆಪಿ ಬಯಸಿದ್ದಾರೆ ಎಂದು ಸಂತಸಪಟ್ಟರು.
ಮುಂದೆ ಬಿಜೆಪಿ ಪೂರ್ಣ ಪ್ರಮಾಣದ ಅಧಿಕಾರ ಹಿಡಿಯುತ್ತೆ. ಕಾಂಗ್ರೆಸ್ ಅವನತಿ ಆರಂಭವಾಗಿದೆ. ಪ್ರಿಯಾಂಕಾ ಗಾಂಧಿಯನ್ನ ಇಂದಿರಾಗಾಂಧಿಗೆ ಹೋಲಿಕೆ ಮಾಡಿ ಮೂರು ಬಾರಿ ಪ್ರಚಾರ ಮಾಡ್ಸಿದ್ರು. ಆದರೂ ಏನೂ ವರ್ಕೌಟ್ ಆಗಿಲ್ಲ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: ಅಪ್ಪನ ಸೋಲಿಗೆ ಸೇಡು ತೀರಿಸಿಕೊಂಡ ಹೆಣ್ಮಕ್ಕಳು: ಉತ್ತರಾಖಂಡ ಚುನಾವಣೆಯಲ್ಲಿ ಗೆದ್ದು ಇತಿಹಾಸ!
ರಾಹುಲ್ ಗಾಂಧಿಯನ್ನ ಪದೇ ಪದೇ ಲಾಂಚ್ ಮಾಡಿ ಲಾಂಚ್ ಪ್ಯಾಡ್ ಮುರಿದುಹೋಗಿದೆ. ಹೀಗಾಗಿ ಕಾಂಗ್ರೆಸ್ ಲೀಡ್ ಮಾಡುವವರು ಯಾರೂ ಇಲ್ಲ. ಕರ್ನಾಟಕದ ಮೇಲೂ ಕಾಂಗ್ರೆಸ್ ಆಸೆ ಇಟ್ಟುಕೊಂಡಿದೆ. ಆದರೆ, ಪರಿಸ್ಥಿತಿ ಅವರಿಗೆ ವಿರುದ್ಧವಾಗಿದೆ. ಕಾಂಗ್ರೆಸ್ನವರನ್ನು ಕೇಳುವವರೇ ದಿಕ್ಕಿಲ್ಲ. ಗಾಂಧಿ ಫ್ಯಾಮಿಲಿ ಬಿಟ್ಟು ಹೊರಬರುವವರೆಗೂ ಕಾಂಗ್ರೆಸ್ ಉದ್ಧಾರ ಆಗಲ್ಲ. ಕಾಂಗ್ರೆಸ್ ಹೊಸ ನಾಯಕತ್ವದ ಹುಡುಕಾಟದಲ್ಲಿದೆ ಎಂದು ಪ್ರತಾಪ್ ಸಿಂಹ ಲೇವಡಿ ಮಾಡಿದರು.