ಮೈಸೂರು: ಜುಲೈ 18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಮೈಸೂರು ಪೇಂಟ್ಸ್ ಆ್ಯಂಡ್ ವಾರ್ನಿಷ್ (ಎಂಪಿವಿಎಲ್)ನಲ್ಲಿ ತಯಾರಾಗುವ ಅಳಿಸಲಾಗದ ಶಾಹಿಯನ್ನು ಪೂರೈಸುವಂತೆ ಚುನಾವಣಾ ಆಯೋಗವು ಪತ್ರ ಬರೆದು ಬೇಡಿಕೆ ಸಲ್ಲಿಸಿದೆ. ಶಾಹಿಯನ್ನು ಕಳುಹಿಸಿಕೊಡಲು ಸಂಸ್ಥೆ ಒಪ್ಪಿಗೆ ಸೂಚಿಸಿದೆ.
ನಗರದ ಎಂಪಿವಿಎಲ್ನಲ್ಲಿ ತಯಾರಿಸುವ ಅಳಿಸಲಾಗದ ಶಾಹಿಯನ್ನು 2018ರ ರಾಷ್ಟ್ರಪತಿ ಚುನಾವಣೆಗೂ ಕೂಡ ಸಂಸ್ಥೆಯು ಪೂರೈಸಿತ್ತು. ಈ ಬಾರಿಯೂ ಕೂಡ ಮೈಸೂರು ಪೈಂಟ್ ಆ್ಯಂಡ್ ವಾರ್ನಿಷ್ ಲಿಮಿಟೆಡ್ ಸಂಸ್ಥೆಯು ಅಳಿಸಲಾಗದ ಶಾಹಿಯುಳ್ಳ ಮಾರ್ಕರ್ ಪೆನ್ಗಳನ್ನು ಸರಬರಾಜು ಮಾಡಲಿದೆ.
ಈಗ ಮುಂಬರುವ ರಾಷ್ಟ್ರಪತಿ ಚುನಾವಣೆಗೆ ಮಾರ್ಕರ್ ಪೆನ್ಗಳನ್ನು ಪೂರೈಸುವಂತೆ ಕೇಂದ್ರ ಚುನಾವಣಾ ಆಯೋಗವು ಪತ್ರ ಬರೆದು ಬೇಡಿಕೆ ಸಲ್ಲಿಸಿದೆ. ಅವರ ಬೇಡಿಕೆಯನ್ನು ಪೂರೈಸಲು ಸಮ್ಮತಿಸಿರುವ ಸಂಸ್ಥೆಯು ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸದ್ಯಕ್ಕೆ ಯಾವ ಪ್ರಮಾಣದಲ್ಲಿ ಎಷ್ಟು ಪೆನ್ಗಳು ಬೇಕೆಂಬುದರ ಬಗ್ಗೆ ಆಯೋಗವು ನಿಖರ ಮಾಹಿತಿ ನೀಡಿಲ್ಲ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.
ದೇಶದಲ್ಲಿ ನಡೆಯಲಿರುವ ಎಲ್ಲ ಚುನಾವಣೆಗಳಿಗೂ ಮೈಸೂರಿನಿಂದಲೇ ಅಳಿಸಲಾಗದ ಶಾಹಿ ಸರಬರಾಜು ಮಾಡಲಾಗುತ್ತದೆ. ಅತಿ ಹಳೆಯ ಸಂಸ್ಥೆಯಾದ ಎಂಪಿವಿಎಲ್ ಗುಣಮಟ್ಟದ ಇಂಕ್ ತಯಾರು ಮಾಡುತ್ತದೆ. ನ್ಯಾಷನಲ್ ಕೆಮಿಕಲ್ ಲ್ಯಾಬೋರೇಟರಿ, ನ್ಯಾಷನಲ್ ರಿಸರ್ಚ್ ಡೆವಲಪ್ಮೆಂಟ್ ಕಾರ್ಪೋರೇಶನ್, ನ್ಯಾಷನಲ್ ಫಿಸಿಕಲ್ ಲ್ಯಾಬೋರೇಟರಿಗಳಿಂದ ತಾಂತ್ರಿಕ ನೆರವು ಪಡೆದು ಪ್ರೋಟೋ ಟೈಪ್ ಮಾರ್ಕರ್ ಪೆನ್ಗಳನ್ನು ತಯಾರಿಸುತ್ತಿದೆ.
ಇದನ್ನೂ ಓದಿ: ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ: ಗೆಲುವಿಗೆ ಮೂರು ಪಕ್ಷಗಳ ಸರ್ವ ಪ್ರಯತ್ನ