ಮೈಸೂರು: ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿನ ಕೋವಿಡ್ ಹಾಸಿಗೆ ನಿರ್ವಹಣೆಯಲ್ಲಿ ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ವೈದ್ಯಕೀಯ ಶಿಕ್ಷಣ, ಆರೋಗ್ಯ ಇಲಾಖೆ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಸರ್ಕಾರಿ ಅತಿಥಿ ಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಏಕಗವಾಕ್ಷಿ ನಿರ್ವಹಣೆಗಾಗಿ ಇಬ್ಬರು ವಿಶೇಷ ಅಧಿಕಾರಿಗಳನ್ನು ನೇಮಕ ಮಾಡಲಾಗುವುದು. ಕೊರೊನಾ ರೋಗಿಗಳು ಹಾಸಿಗೆಗಳು ಇಲ್ಲವೆಂದು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ ಅಲೆಯುವುದು ತಪ್ಪಿಸಬೇಕು. ಕೊರೊನಾ ನಿಯಂತ್ರಣ ಮಾಡಬೇಕು ಎಂಬ ಉದ್ದೇಶ ನಮ್ಮದಾಗಿದೆ ಎಂದರು.
ಖಾಸಗಿ ಆಸ್ಪತ್ರೆಗಳು ಹಂತಹಂತವಾಗಿ ರಾಜ್ಯ ಸರ್ಕಾರ ನಿಗದಿಪಡಿಸಿದ ಹಾಸಿಗೆಗಳನ್ನು ನೀಡಲಿವೆ. ನೀಡದೇ ಇದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ರ‍್ಯಾಪಿಡ್ ಟೆಸ್ಟ್ ಕಡಿಮೆ ಮಾಡಿ, ಆರ್ಟಿಪಿಸಿಆರ್ ಟೆಸ್ಟ್ ಹೆಚ್ಚಳ ಮಾಡುವಂತೆ ಸೂಚನೆ ನೀಡಲಾಗುವುದು ಎಂದು ಹೇಳಿದರು.
ಕೊರೊನಾ ಪ್ರಕರಣದಲ್ಲಿ ಬೆಂಗಳೂರು ಬಿಟ್ಟರೆ, ಮೈಸೂರು ಎರಡನೇ ಸ್ಥಾನದಲ್ಲಿದೆ. ಮೈಸೂರಿನಲ್ಲಿ ಪ್ರತಿದಿನ 3-4 ಸಾವಿರ ಕೊರೊನಾ ಟೆಸ್ಟ್ ಮಾಡಬೇಕು ಎಂಬ ಸೂಚನೆ ನೀಡಲಾಗುವುದು ಎಂದು ಹೇಳಿದರು.
ನಾನು ಶ್ರೀರಾಮುಲು ಒಳ್ಳೆಯ ಸ್ನೇಹಿತರು:
ಆರೋಗ್ಯ ಖಾತೆ ನನಗೆ ವಹಿಸಿರುವುದರಿಂದ, ಶ್ರೀರಾಮುಲು ಅವರಿಗೆ ಯಾವುದೇ ಬೇಸರವಿಲ್ಲ. ಅವರು ಬಯಸಿದಂತೆ ಸಮಾಜ ಕಲ್ಯಾಣ ಖಾತೆ ನೀಡಲಾಗಿದೆ. ಮೂಲ, ವಲಸಿಗ ಎಂಬ ಪ್ರಶ್ನೆ ಬರುವುದಿಲ್ಲ. ನಾನು ಶ್ರೀರಾಮುಲು ಒಳ್ಳೆಯ ಸ್ನೇಹಿತರು ಎಂದರು.
ದಸರಾ ಸಮಿತಿ ಇದೆ: ಜಂಬೂ ಸವಾರಿಗೆ 300 ಜನ ನಿಗದಿ ಮಾಡಲಾಗಿದೆ. ಯಾರನ್ನು ಆಯ್ಕೆ ಮಾಡಬೇಕು ಎನ್ನುವುದು ದಸರಾ ಸಮಿತಿ ನಿರ್ಧಾರ ಮಾಡಲಿದೆ ಎಂದು ಹೇಳಿದರು.