ಮೈಸೂರು: ಹಿಂದಿನ ಬಿಜೆಪಿ ಸರ್ಕಾರ ಪಠ್ಯಪುಸ್ತಕ ವಿಚಾರದಲ್ಲಿ ಮಾಡಿರುವ ಯಡವಟ್ಟುಗಳನ್ನ ನಾವು ತಿದ್ದುತ್ತೇವೆ ಎಂದು ಸಮಾಜ ಕಲ್ಯಾಣ ಸಚಿವ ಡಾ ಹೆಚ್. ಸಿ.ಮಹದೇವಪ್ಪ ಹೇಳಿದರು. ಇಂದು ಮೈಸೂರಿನ ಟೌನ್ ಹಾಲ್ ಮುಂಭಾಗದಲ್ಲಿರುವ ಡಾ. ಬಿ. ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ಅವರು, ಇತಿಹಾಸ ಪುರುಷರನ್ನೇ ಇವರು ಇತಿಹಾಸ ಪುರುಷನಲ್ಲ ಎಂದು ಹೇಳಿದ್ದಾರೆ. ಆ ತಪ್ಪನ್ನು ನಾವು ತಿದ್ದುತ್ತೇವೆ. ವಾಸ್ತವ ಸತ್ಯವನ್ನು ಪಠ್ಯಪುಸ್ತಕದಲ್ಲಿ ಅಳವಡಿಸಲಾಗುವುದು ಎಂದರು.
ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಬಿಜೆಪಿ ಪಠ್ಯ ಪುಸ್ತಕ ವಿಚಾರದಲ್ಲಿ ಮಾಡಿರುವ ಯಡವಟ್ಟುಗಳನ್ನ ನಾವು ತಿದ್ದುತ್ತೇವೆ. ಇತಿಹಾಸ ಪುರುಷರನ್ನೆ ಬಿಜೆಪಿಯವರು ಇತಿಹಾಸ ಪುರುಷನಲ್ಲ ಎಂದು ಹೇಳಿದ್ದಾರೆ. ಈ ತಪ್ಪನ್ನು ನಾವು ತಿದ್ದಬೇಕು. ಚುನಾವಣೆಗೂ ಮುನ್ನ ಈ ವಿಚಾರವನ್ನು ಹೇಳಿದ್ದೆವು. ಈಗ ಅದನ್ನೇ ಮಾಡತ್ತೇವೆ. ಅವರು ಬರೆದಿದ್ದೆಲ್ಲ ಇತಿಹಾಸವಲ್ಲ. ವಾಸ್ತವ ಸತ್ಯವನ್ನು ಪಠ್ಯದಲ್ಲಿ ಸೇರಿಸುತ್ತೇವೆ. ಸತ್ಯ ಅಲ್ಲದ್ದನ್ನ ತೆಗೆದುಹಾಕುತ್ತೇವೆ ಎಂದು ಹೇಳಿದರು.
ಸರ್ಕಾರ ಗ್ಯಾರಂಟಿಗಳು ಜಾರಿ ಮಾಡಲು ವಿಪಕ್ಷಗಳು ಗಡುವು ನೀಡಿರುವ ಕುರಿತು ಮಾತನಾಡಿ, ಬಿಜೆಪಿಯಾಗಲಿ ಮತ್ಯಾವುದೇ ಪಕ್ಷವಾಗಲಿ, ನೀವು ಭರವಸೆ ಕೊಟ್ಟಿದ್ದ ಗ್ಯಾರಂಟಿಗಳನ್ನು ಜಾರಿಮಾಡಿ ಎಂದು ಗಡುವು ಕೊಡುವುದಕ್ಕೆ ಯಾವುದೇ ನೈತಿಕತೆಯೂ ಇಲ್ಲ ಮತ್ತು ಅಧಿಕಾರವು ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಪಕ್ಷಗಳಿಗೆ ಪ್ರಶ್ನಿಸುವ ಅಧಿಕಾರ ಇದೆ. ಸರ್ಕಾರ ಇನ್ನೂ ಕುಂತೆ ಇಲ್ಲ, ಅಷ್ಟರಲ್ಲೇ ಆತುರಾತುರವಾಗಿ ಗ್ಯಾರಂಟಿ ಅನುಷ್ಠಾನಕ್ಕೆ ಬಿಜೆಪಿಯವರು ಗಡುವು ನೀಡಲು ಇವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ಜನ ಬಿಜೆಪಿಯನ್ನು ಸೋಲಿಸಿದ್ದಾರೆ, ಸೋಲಲು ಆಡಳಿತದ ಎಲ್ಲ ರಂಗಗಳ ವೈಫಲ್ಯ ಮತ್ತು ಮಿತಿಮೀರಿದ ಭ್ರಷ್ಟಾಚಾರ. ಇವೆರಡು ಅಭಿವೃದ್ದಿಗೆ ಮಾರಕ. ಅವರು ಜನರ ವಿಶ್ವಾಸವನ್ನು ಕಳೆದುಕೊಂಡರು, ಜನ ಅವರನ್ನು ಸೋಲಿಸಿದರು. ಸೋತು ಹರಶಾರಾಗಿದ್ದಾರೆ. ರಾಜ್ಯದಲ್ಲಿ ಅವರ ಮೇಲೆ ಆಡಳಿತ ವಿರೋಧಿ ಅಲೆ ಇತ್ತು. ವಿರೋಧ ಪಕ್ಷವಾಗಿ ಕಾಂಗ್ರೆಸ್ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಮತ್ತು ಭ್ರಷ್ಟಾಚಾರವನ್ನು ಪರಿಣಾಮಕಾರಿ ಬಿಂಬಿಸಲು ಯಶಸ್ವಿಯಾಯಿತು ಎಂದರು.
ನಾವು ಅಧಿಕಾರಕ್ಕೆ ಬಂದರೆ ಏನೂ ಮಾಡುತ್ತೇವೆ ಎಂದು ಜನರಿಗೆ ಚುನಾವಣಾ ಪ್ರಣಾಳಿಕೆಯಲ್ಲಿ ಆಶ್ವಾಸನೆಯನ್ನು ಕೊಟ್ಟಿದ್ದೇವೆ ಜೊತೆಗೆ ಐದು ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ನಾವು ಗ್ಯಾರಂಟಿಗಳನ್ನು ಈಡೇರಿಸಲು ಬದ್ದರಾಗಿದ್ದೀವಿ ಎಂದು ತಿಳಿಸಿದರು. ಬಿಜೆಪಿಯವರ ತಂತ್ರ ಜನರಿಗೆ ಅರ್ಥವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ಜನರಿಗೆ 2014 ರಲ್ಲಿ ಕೊಟ್ಟ ಭರವಸೆ ಇನ್ನೂ ಈಡೇರಿಲ್ಲ ಇದಕ್ಕೆ ಉತ್ತರ ಕೊಡಲಿ ಎಂದು ಬಿಜೆಪಿ ವಿರುದ್ಧ ಹರಿಹಾಯ್ದಾರು. ಇನ್ನು ಸೋಮವಾರ ನಡೆದ ಅಪಘಾತದಲ್ಲಿ ಗಾಯಗೊಂಡ ಮೂವರು ಕೆ ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.