ಮೈಸೂರು: ರಂಗಾಯಣದಲ್ಲಿ ಸಾಂಬಶಿವ ಪ್ರಹಸನ ನಾಟಕವನ್ನು, ತಿರುಚಿ ಪ್ರದರ್ಶಿಸಿದವರ ವಿರುದ್ಧ ಕ್ರಮ ಕೈಗೊಳ್ಳಲುವಂತೆ ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ ಅವರು ಪತ್ರ ಬರೆದಿದ್ದಾರೆ.
ಮೈಸೂರಿನ ರಂಗಾಯಣದಲ್ಲಿ ತಮ್ಮ ನಾಟಕ ಸಾಂಬಶಿವ ಪ್ರಹಸನವನ್ನು ಅಸಹ್ಯವಾಗಿ ತಿರುಚಿ ಪ್ರದರ್ಶಿಸಿರುವ ಬಗ್ಗೆ ನನಗೆ ತುಂಬ ವಿಷಾದವಾಗಿದೆ. ಮೊದಲನೆಯದಾಗಿ ನನ್ನ ನಾಟಕ ಪ್ರದರ್ಶಿಸುವುದಕ್ಕೆ ತಮ್ಮ ಅನುಮತಿ ಕೇಳಲೇ ಬೇಕಾಗಿತ್ತು. ಆದರೆ ಇವರು ಕೇಳಿಲ್ಲ.
ರಂಗಾಯಣವಾದರೂ ನನ್ನ ಅನುಮತಿ ಇಲ್ಲದ ನಾಟಕ ಪ್ರದರ್ಶನಕ್ಕೆ ಅವಕಾಶ ಕೊಟ್ಟಿರುವುದು ವಿಷಾದಕರ. ಎರಡನೆಯದಾಗಿ, ತಮ್ಮ ಯಾವುದೇ ನಾಟಕಗಳಲ್ಲಿ ವ್ಯಕ್ತಿಗತ ನಿಂದನೆ ಇರುವುದು ಸಾಧ್ಯವಿಲ್ಲ ಎಂದು ಸಾಹಿತಿ ಚಂದ್ರಶೇಖರ ಕಂಬಾರರು ಹೇಳಿದ್ದಾರೆ .
ಅನುಮತಿ ಇಲ್ಲದೇ ನಾಟಕವನ್ನು ಪ್ರದರ್ಶಿಸಿದ್ದಕ್ಕೆ ಹಾಗೂ ನಾಟಕ ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟವರಿಗೂ ಮತ್ತು ತಾವು ಬರೆದ ಸಾಹಿತ್ಯದಲ್ಲಿ ಇಲ್ಲದ ಅಂಶವನ್ನು ಸೇರಿಸಿದ್ದಕ್ಕೆ ನಿರ್ದೇಶಕರ ಮೇಲೂ ಹಾಗೂ ಈ ಅಹಿತಕರ ವಾತಾವರಣಕ್ಕೆ ಕಾರಣರಾದ ಸಂಬಂಧಪಟ್ಟವರ ಮೇಲೂ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ನಗರ ಪೊಲೀಸ್ ಆಯುಕ್ತರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಪ್ರಕರಣದ ಹಿನ್ನೆಲೆ: ರಂಗಾಯಣದಲ್ಲಿ ನಡೆದ ನಾಟಕ ಪ್ರದರ್ಶನದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರರ್ ವಿರುದ್ಧ ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಬಿ ಸುಬ್ರಹ್ಮಣ್ಯ ಪೊಲೀಸರಿಗೆ ಈಗಾಗಲೇ ದೂರು ನೀಡಿದ್ದಾರೆ
ಶನಿವಾರ ಸಂಜೆ ರಂಗಾಯಣದ ಭೂಮಿ ಗೀತದಲ್ಲಿ ಚಂದ್ರಶೇಖರ ಕಂಬಾರರ ‘ಸಾಂಬಶಿವ ಪ್ರಹಸನ’ ನಾಟಕವನ್ನು ಕಾರ್ತಿಕ್ ಉಪಮನ್ಯು ನಿರ್ದೇಶನದಲ್ಲಿ ಸಂಸ್ಥೆಯ ‘ನಾಗರತ್ನಮ್ಮ’ ರಂಗ ಕಾರ್ಯಾಗಾರದ ಶಿಬಿರಾರ್ಥಿಗಳು ಪ್ರದರ್ಶಿಸುತ್ತಿದ್ದರು. ನಾಟಕದ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಲಾಗಿದೆ ಎಂದು ಆರೋಪಿಸಿ ಸಿದ್ದರಾಮಯ್ಯ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದರು.
ಇದನ್ನೂ ಓದಿ: ಮೈಸೂರು ಚರ್ಚ್ ಕಳ್ಳತನ ಪ್ರಕರಣದ ಆರೋಪಿ ಸೆರೆ; ಕೃತ್ಯ ಎಸಗಿದ್ದು ಈ ಕಾರಣಕ್ಕೆ!