ಮೈಸೂರು: ಕೋವಿಡ್ ಹಿನ್ನೆಲೆ ಈಗಾಗಲೇ ಎರಡು ಬಾರಿ ಲಾಕ್ಡೌನ್ ಮಾಡಲಾಗಿದ್ದು, ಇದರಿಂದ ಜನರ ಜೀವನ ದುಸ್ಥಿತಿಯಲ್ಲಿದೆ. ಇಂತಹ ಸಂದರ್ಭದಲ್ಲಿ ಮತ್ತೆ ಕರ್ಫ್ಯೂ, ಲಾಕ್ ಡೌನ್ ನಂತಹ ನಿರ್ಬಂಧಗಳನ್ನು ಹೇರಿ ಜನರನ್ನ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಬೇಡಿ ಎಂದು ತಮ್ಮದೇ ಸರ್ಕಾರಕ್ಕೆ ಸಂಸದ ಪ್ರತಾಪ್ ಸಿಂಹ ಒತ್ತಾಯಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆ ಸರ್ಕಾರ ಲಾಕ್ ಡೌನ್ ಮತ್ತು ವೀಕೆಂಡ್ ಕರ್ಫ್ಯೂಗಳಂತಹ ಕಠಿಣ ನಿರ್ಬಂಧಗಳನ್ನು ಜನರ ಮೇಲೆ ಹೇರುತ್ತಿದೆ. ಇದರಿಂದ ಜನರಿಗೆ ಬಹಳ ತೊಂದರೆಯಾಗುತ್ತಿದೆ. ಸರ್ಕಾರಕ್ಕೆ ಜನರ ಜೀವ ಎಷ್ಟು ಮುಖ್ಯವೋ, ಹಾಗೆ ಅವರು ಜೀವನ ನಡೆಸುವುದು ಅಷ್ಟೇ ಮುಖ್ಯ. ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಲಭ್ಯಗಳನ್ನು ಹೆಚ್ಚಿಸಿ, ಸೋಂಕು ಹರಡದಂತೆ ಎಚ್ಚರವಹಿಸಿ ಎಂದು ಪ್ರತಾಪ್ ಸಿಂಹ ಸರ್ಕಾರಕ್ಕೆ ಒತ್ತಾಯಿಸಿದರು.
ಮೊದಲ ಕೊರೊನಾ ಅಲೆಯ ಸಂದರ್ಭದಲ್ಲಿ ಆಸ್ಪತ್ರೆಗಳು ಕೊರೊನಾ ಸೋಂಕಿತರನ್ನ ನಿಭಾಯಿಸಲು ಶಕ್ತವಾಗಿರಲಿಲ್ಲ. ಎರಡನೇ ಅಲೆಯ ಸಂದರ್ಭದಲ್ಲಿ ಆಕ್ಸಿಜನ್ ಮತ್ತು ವೆಂಟಿಲೇಟರ್ ಸಮಸ್ಯೆ ಉಂಟಾಯಿತು. ಆದರೆ ಈಗ ಎಲ್ಲಾ ಸಮಸ್ಯೆ ಬಗೆಹರಿದಿದೆ ಮತ್ತು ಹೊಸ ಓಮಿಕ್ರಾನ್ನಿಂದ ಪ್ರಾಣಾಪಾಯ ಇಲ್ಲ. ಹಾಗಾಗಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಕಡಿಮೆ ಇದೆ. ಲಾಕ್ಡೌನ್ ಬೇಡ ಎಂದು ತಮ್ಮದೇ ಸರ್ಕಾರಕ್ಕೆ ಮನವಿ ಮಾಡಿದರು.
ಇದೇ ವೇಳೆ ಸಂಸ್ಕೃತ ವಿವಿ ಗೆ ಸರ್ಕಾರ ಹಣ ಬಿಡುಗಡೆ ಮಾಡಿರುವುದಕ್ಕೆ ಆಕ್ಷೇಪಣೆ ಮಾಡಿರುವ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಅವರಿಗೆ ತಿರುಗೇಟು ನೀಡಿರುವ ಸಂಸದ ಪ್ರತಾಪ್ ಸಿಂಹ, ನಾರಾಯಣ ಗೌಡ ಅವರ ಹೆಸರಿನಲ್ಲಿಯೇ ಸಂಸ್ಕೃತ ಅಡಗಿದೆ. ಹಾಗಂತ ಅವರು ತಮ್ಮ ಹೆಸರನ್ನ ಬದಲಾವಣೆ ಮಾಡಿಕೊಳ್ಳುತ್ತಾರಾ? ಎಂದು ಪ್ರಶ್ನಿಸಿದರು. ಸಂಸ್ಕೃತ ಬಹಳ ಪ್ರಾಚೀನ ಭಾಷೆ. ಎಲ್ಲಾ ಭಾಷೆಗಳ ತಾಯಿ ಭಾಷೆ ಆಗಿದೆ. ಹೀಗಾಗಿಯೇ ಸಂಸ್ಕೃತವನ್ನು ರಾಷ್ಟ್ರೀಯ ಭಾಷೆ ಮಾಡಬೇಕು ಅಂತ ಡಾ. ಬಿ. ಆರ್. ಅಂಬೇಡ್ಕರ್ ಅವರು ಪ್ರಸ್ತಾವನೆ ಸಲ್ಲಿಸಿದ್ದರು. ಅಂಬೇಡ್ಕರ್ ಅವರಿಗಿಂತ ಯಾರೂ ದೊಡ್ಡ ಮೇಧಾವಿಗಳು ಇಲ್ಲವೆಂದು ನಾನು ಭಾವಿಸಿದ್ದೇನೆ. ತ್ರಿಭಾಷ ಸೂತ್ರವನ್ನು ಜಾರಿ ಮಾಡಿದ್ದೇ ಇಂದಿರಾ ಗಾಂಧಿಯವರು, ಟಿಪ್ಪು ವಿವಿ ಸ್ಥಾಪನೆ ವಿಚಾರ ಬಂದಾಗ ಯಾಕೆ ಮಾತನಾಡದೇ ಮೌನವಾಗಿದ್ದರು ಎಂದು ಪ್ರಶ್ನಿಸಿದರು. ನಾರಾಯಣ ಗೌಡ ಅವರು ಚುನಾವಣೆಗೆ ನಿಂತಿದ್ದಾಗ ಅವರ ಮನೆ ಮೇಲೆ ದಾಳಿ ಮಾಡಲಾಗಿತ್ತು. ಅವರ ಮನೆಯಲ್ಲಿ ಹಣ ಸಿಕ್ಕಿರುವುದು ಎಲ್ಲರಿಗೂ ಗೊತ್ತಿದೆ. ಸುಮ್ಮನೆ ಮೋದಿಯವರನ್ನು ವಿರೋಧಿಸುವುದನ್ನು ಬಿಡಿ ಎಂದರು.
ಇದನ್ನೂ ಓದಿ: ಇಂದು ಸಿಎಂ ಸಭೆ : ವೀಕೆಂಡ್ ಕರ್ಫ್ಯೂ ಬಗ್ಗೆ ಚರ್ಚೆ.. ಸಚಿವ ಡಾ. ಸುಧಾಕರ್
ಮೇಕೆದಾಟು ಪಾದಯಾತ್ರೆ ಬಂದೋಬಸ್ತ್ಗೆ ತೆರಳಿದ್ದ ಪೊಲೀಸರಿಗೆ ಕೊರೊನಾ ಸೋಂಕು ತಗುಲಿರುವ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಅವರು, ಮೇಕೆದಾಟು ಪಾದಯಾತ್ರೆ ಬೇಡವೆಂದು ಮುಖ್ಯಮಂತ್ರಿ ಮನವಿ ಮಾಡಿದ್ದರು. ಱಲಿ ಮಾಡಲು ಇದು ಸೂಕ್ತ ಕಾಲ ಅಲ್ಲ ಎಂದಿದ್ದರು. ಆದರೂ ಱಲಿ ಹೆಸರಿನಲ್ಲಿ ದೊಡ್ಡ ಮಟ್ಟದಲ್ಲಿ ಜನರನ್ನು ಸೇರಿಸಿ ಜಾತ್ರೆ ಮಾಡಿದರು. ಅದರ ಪರಿಣಾಮವಾಗಿ ಇವತ್ತು ಬಹಳಷ್ಟು ಜನ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಮುಂದೆಯಾದರೂ ಕಾಂಗ್ರೆಸ್ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಹೇಳುವ ಮೂಲಕ ಕಾಂಗ್ರೆಸ್ ಪಾದಯಾತ್ರೆಗೆ ಸಂಸದ ಪ್ರತಾಪ್ ಸಿಂಹ ಟಾಂಗ್ ನೀಡಿದರು.