ಮೈಸೂರು : ಜಿಲ್ಲೆಯಲ್ಲಿ ಪ್ರತಿದಿನವೂ ಕೊರೊನಾ ಪಾಸಿಟಿವ್ ಹಾಗೂ ಸಾವಿನ ಪ್ರಕರಣ ಹೆಚ್ಚಾಗುತ್ತಿವೆ. ಆದರೂ ಜನರು ಭಯ ಪಡಬೇಡಿ. ಎಲ್ಲವೂ ನಿಯಂತ್ರಣದಲ್ಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೈಸೂರಿನಲ್ಲಿ ವೆಂಟಿಲೇಟರ್,ಆಕ್ಸಿಜನ್, ರೆಮಿಡಿಸಿವಿಯರ್, ಔಷಧಿ ಸಮಸ್ಯೆ ಬಗೆಹರಿದಿದೆ.
100 ವೆಂಟಿಲೇಟರ್, 20 ಆಕ್ಸಿಜನ್ ಸಿಲಿಂಡರ್ ಹಾಗೂ 998 ರೆಮಿಡಿಸಿವಿಯರ್ ಔಷಧಿ ಜಿಲ್ಲೆಗೆ ಬರುತ್ತಿವೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ರೆಮಿಡಿಸಿವಿಯರ್ ಸಿಗಲಿದೆ ಎಂದು ತಿಳಿಸಿದರು.
ಯಾರಾದರೂ ಹೆಚ್ಚಿನ ಬೆಲೆಗೆ ರೆಮಿಡಿಸಿವಿಯರ್ ಔಷಧಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದರೆ, ಅವರ ವಿರುದ್ದ ಕಟ್ಟಿನಿಟ್ಟಿನ ಕ್ರಮಕೈಗೊಳ್ಳಿ ಎಂದು ತಿಳಿಸಲಾಗಿದೆ. ದಿನದಿಂದ ದಿನಕ್ಕೆ ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಹಾಗೂ ಸಾವಿನ ಪ್ರಕರಣ ಹೆಚ್ಚಾಗುತ್ತಿವೆ.
ಆದರೂ ಸಾರ್ವಜನಿಕರು ಭಯ ಪಡಬೇಡಿ. ಜಿಲ್ಲೆಯಲ್ಲಿ ಸೋಂಕು ಮತ್ತು ಸಾವಿನ ಸಂಖ್ಯೆ ಹೆಚ್ಚಾಗಲು ಅಕ್ಕ ಪಕ್ಕದ ಜಿಲ್ಲೆಯಿಂದ ಕೊನೆ ಕ್ಷಣದಲ್ಲಿ ಸೋಂಕಿತರು ಬರುತ್ತಿರುವುದು ಕಾರಣವಾಗಿದೆ ಎಂದು ಸ್ಪಷ್ಟಪಡಿಸಿದರು.
ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಖಾಸಗಿ ಆಸ್ಪತ್ರೆಗಳು ಸಹ ಸಹಕಾರ ನೀಡುತ್ತಿವೆ. ಕಟ್ಟುನಿಟ್ಟಾಗಿ 14 ದಿನ ಜನತಾ ಕರ್ಫ್ಯೂಗೆ ಜನರು ಸಹಕಾರ ನೀಡಬೇಕು. ಇಲ್ಲದಿದ್ದರೆ ಕಠಿಣ ಕ್ರಮಕೈಗೊಳ್ಳಿ ಎಂದು ಪೊಲೀಸರಿಗೆ ತಿಳಿಸಿದ್ದೇನೆ.
ಎಲ್ಲವೂ ನಿಯಂತ್ರಣದಲ್ಲಿದೆ. ಜನರು ಸಹಕಾರ ನೀಡಬೇಕು, ಇಲ್ಲದಿದ್ದರೆ ಮತ್ತೊಂದು ವಾರ ಲಾಕ್‌ಡೌನ್ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
ಓದಿ: ಕೋವಿಡ್ ರೋಗಿಗೆ ರೆಮ್ಡಿಸಿವಿರ್ ಔಷಧಿ ಕೊಡಿಸಿ: ಆರೋಗ್ಯಾಧಿಕಾರಿಯ ಕಾಲಿಗೆ ಬಿದ್ದು ಮಹಿಳೆಯರ ಮನವಿ