ಮೈಸೂರು : ಬಳ್ಳಾರಿಯಲ್ಲಿ ಗಣಿಗಾರಿಕೆ ನಡೆಸಲು ಜಿಂದಾಲ್ ಕಂಪನಿಗೆ ರಾಜ್ಯ ಸರ್ಕಾರ ಭೂಮಿ ನೀಡಬಾರದು ಎಂದು ವಾಟಾಳ್ ಪಕ್ಷದ ಮುಖ್ಯಸ್ಥ ವಾಟಾಳ್ ನಾಗರಾಜ್ ಆಗ್ರಹಿಸಿದರು.
ನಗರದ ರೈಲ್ವೆ ನಿಲ್ದಾಣದ ಬಳಿ ಮಲಗಿಕೊಂಡು ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿದ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು. ಬಳ್ಳಾರಿ ಜಿಲ್ಲೆಯಲ್ಲಿ 3,666 ಎಕರೆ ಪ್ರದೇಶವನ್ನು ಜಿಂದಾಲ್ ಕಂಪನಿಗೆ ಕೊಡುವ ಮೂಲಕ ರಾಜ್ಯ ಖಜಾನೆಯನ್ನು ರಾಜ್ಯ ಸರ್ಕಾರ ಲೂಟಿ ಮಾಡುತ್ತಿದೆ. ಭೂಮಿಯನ್ನು ನೀಡದಂತೆ ಒತ್ತಾಯಿಸಿ ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದರು.
ನಮಗೇ ನೀರಿಲ್ಲ, ತಮಿಳುನಾಡಿಗೆ ಹೇಗೆ ನೀರು ಕೊಡೋದು?
ರಾಜ್ಯದಲ್ಲಿಯೇ ನೀರಿಗೆ ಬರಗಾಲವಿದೆ. ಹೀಗಿರುವಾಗ ಕಾವೇರಿ ಕೊಳ್ಳದಿಂದ ತಮಿಳುನಾಡಿಗೆ ಹೇಗೆ ನೀರು ಹರಿಸುವುದು? ಕಾವೇರಿ ನಿರ್ವಹಣಾ ಪ್ರಾಧಿಕಾರದ ನಡೆಯನ್ನು ಖಂಡಿಸಿ, ರಾಜ್ಯದಿಂದ ಆಯ್ಕೆಯಾಗಿರುವ ಸಂಸದರು ರಾಜ್ಯದ ಪರವಾಗಿ ಹೋರಾಟ ಮಾಡಬೇಕು ಎಂದು ಆಗ್ರಹಿಸಿದರು.