ಮೈಸೂರು : ಕೊರೊನಾ ವೈರಸ್ ಹಿನ್ನೆಲೆ ಈ ಬಾರಿ ಮನೆಯಿಂದಲೇ ಯೋಗ ಎಂಬ ಪರಿಕಲ್ಪನೆಯೊಂದಿಗೆ ಯೋಗ ದಿನವನ್ನು ಆಚರಿಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್ 21 ರಂದು ನಡೆಯಲಿರುವ ವಿಶ್ವ ಯೋಗ ದಿನವನ್ನು ಈ ಬಾರಿ ಪ್ರತಿಯೊಬ್ಬರು ತಮ್ಮ ತಮ್ಮ ಮನೆಯ ಟೆರೆಸ್ ಮೇಲೆ, ಬಾಲ್ಕನಿಯಲ್ಲಿ ಮಾಡಬೇಕು. ಮನೆಯಲ್ಲಿ ಯೋಗ ಮಾಡುವ ಫೋಟೋವನ್ನು ತೆಗೆದು ಸರ್ಕಾರಿ ಯೋಗ ವೆಬ್ ಸೈಟ್ನಲ್ಲಿ ಹಾಕಿದ್ರೆ ಅಲ್ಲಿಯೇ ಸರ್ಟಿಫಿಕೇಟ್ ಬರುತ್ತದೆ. ಅದನ್ನು ಡೌನ್‌ಲೋಡ್ ಮಾಡಿ ಪಡೆಯಬಹುದು ಎಂದು ತಿಳಿಸಿದರು.
ಜೂನ್ 21 ರಂದು ಬೆಳಗ್ಗೆ 7 ಗಂಟೆಯಿಂದ 7.45 ರವರೆಗೆ ಮನೆಯಿಂದಲೇ ಯೋಗ ಮಾಡಿ. ಈ ಬಾರಿ ಬರಿ ಮನೆಯಿಂದ ಯೋಗ ಕಾರ್ಯಕ್ರಮದಲ್ಲಿ ಒಂದು ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ. ಮಹಡಿಯ ಮೇಲಿನ ಯೋಗವನ್ನು ಡ್ರೋನ್ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗುವುದು ಎಂದರು.
ಅಜ್ಜಿ-ಮೊಮ್ಮಗನಿಂದ ಮನೆಯ 4 ಜನರಿಗೆ ಸೋಂಕು : ತಮಿಳುನಾಡಿನಿಂದ ನಗರದ ಇಟ್ಟಿಗೆಗೂಡಿಗೆ ಬಂದಿದ್ದ ವ್ಯಕ್ತಿಗಳಿಂದ ಅಜ್ಜಿ ಮೊಮ್ಮಗನಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈಗ ಈ ಇಬ್ಬರು ಗುಣಮುಖರಾಗಿ ಮನೆಗೆ ಮರಳಿದ ನಂತರ, ಅದೇ ಮನೆಯಲ್ಲಿದ್ದ ಮತ್ತೆ ನಾಲ್ವರಿಗೆ ಸೋಂಕು ತಗಲಿದೆ. ಇದರಿಂದ ಇಟ್ಟಿಗೆಗೂಡಿನಲ್ಲಿರುವ ಅವರ ಮನೆಯನ್ನು ಸೀಲ್ಡೌನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆಷಾಢದ ಹೆಸರಿನಲ್ಲಿ ಪ್ರಸಾದ ವಿನಿಯೋಗಕ್ಕೆ ನಿರ್ಬಂಧ: ಆಷಾಢ ಮಾಸದಲ್ಲಿ ಮೈಸೂರು ಜಿಲ್ಲೆಯಾದ್ಯಂತ ಯಾವುದೇ ದೇಗುಲದಲ್ಲೂ ಪ್ರಸಾದ ವಿತರಣೆ ಮಾಡದಂತೆ ನಿರ್ಬಂಧ ವಿಧಿಸಲಾಗಿದೆ. ಆಷಾಢ ಮಾಸದ ಮಂಗಳವಾರದಂದೂ ಚಾಮುಂಡಿಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಬೇಕೆಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಮತ್ತೆ ಕೆಲವರು ಇಡೀ ಆಷಾಢ ಮಾಸದಲ್ಲಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಬೇಕೆಂದು ಹೇಳುತ್ತಿದ್ದಾರೆ. ಈ ಬಗ್ಗೆ ಸಾಧಕ ಬಾಧಕಗಳ ಕುರಿತು ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.