ಮೈಸೂರು: ಕುಬ್ಜತೆ ದೇಹಕ್ಕಷ್ಟೇ ಸಾಧನೆಗಲ್ಲ ಎಂಬುದನ್ನು ಗಿರಿಜನ ಯುವತಿ ನೆಟ್ ಪರೀಕ್ಷೆ ಪಾಸ್ ಮಾಡುವ ಮೂಲಕ ಸಾಧಿಸಿ ತೋರಿಸಿದ್ದಾಳೆ.
ಓದಿ: ಸ್ಕೇಟಿಂಗ್ನಲ್ಲಿ 12 ನಿಮಿಷಗಳಲ್ಲಿ 3 ಕಿ.ಮೀ. ಕ್ರಮಿಸಿದ ಮಕ್ಕಳು.. ವ್ಯಾಪಕ ಮೆಚ್ಚುಗೆ..!
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದ ಪಿ.ವಿ.ಸೃಜನಾ, ಯುಜಿಸಿ ನಡೆಸುವ ರಾಷ್ಟ್ರೀಯ ಸಹಾಯಕ ಪ್ರಾಧ್ಯಾಪಕರ ಹುದ್ದೆಯ ಎನ್ಇಟಿ (NET) ಪರೀಕ್ಷೆಯಲ್ಲಿ ತೇರ್ಗಡೆ ಆದ ಮೊದಲ ಗಿರಿಜನ ಯುವತಿ ಎಂಬ ಖ್ಯಾತಿಗೆ ಪಾತ್ರಳಾಗಿದ್ದಾಳೆ. ಈಕೆಗೆ ಐಎಎಸ್ (IAS) ಪಾಸ್ ಮಾಡುವ ಆಸೆ ಇದೆ.
ವಿದ್ಯಾರ್ಥಿನಿ ಹಿನ್ನೆಲೆ:
ರಾಜ್ಯದಲ್ಲಿ ಸೂಕ್ಷ್ಮ ಸಮುದಾಯ ಎಂದೇ ಗುರುತಿಸಿಕೊಂಡ ಆದಿವಾಸಿ ಸಮುದಾಯದಲ್ಲಿ ಶೈಕ್ಷಣಿಕವಾಗಿ ಸಾಧನೆಗೈದವರಲ್ಲಿ ಸೃಜನಾ ಪ್ರಥಮ ಸ್ಥಾನಕ್ಕೇರಿದ್ದಾರೆ. ಈ ಹಿಂದೆ ಬಿಳಿಗಿರಿರಂಗನ ಬೆಟ್ಟದ ಡಾ. ಸುದರ್ಶನ್ ಮಾರ್ಗದರ್ಶನದಲ್ಲಿ ಕೆಲವು ಗಿರಿಜನರು ಶಿಕ್ಷಣದಲ್ಲಿ ದಾಪುಗಾಲು ಹಾಕಿದ್ದರು. ಆ ನಂತರದಲ್ಲಿ ಗಿರಿಜನರ ಶೈಕ್ಷಣಿಕ ಪ್ರಯಾಣ ಸೊರಗಿತ್ತು. ನಾಗರಹೊಳೆ ಅರಣ್ಯದಿಂದ 22 ವರ್ಷಗಳ ಹಿಂದೆ ಹೊರ ಬಂದ ಗಿರಿಜನರಲ್ಲಿ ಈ ಕುಟುಂಬವೂ ಒಂದಾಗಿತ್ತು.
ವಿರಾಜಪೇಟೆ ತಾಲೂಕಿನ ಬಾಲೇಕೋವು ಹಾಡಿಯಲ್ಲಿ ಜನಿಸಿದ ಸೃಜನಾ, ಉಮ್ಮತ್ತೂರು ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದಾರೆ. ಹುಣಸೂರಿನಲ್ಲಿ ಪಿಯುಸಿ ಮತ್ತು ಪದವಿ ಶಿಕ್ಷಣ ಪೂರೈಸಿದ್ದಾರೆ. 2018-19ರಲ್ಲಿ ಶೇ. 74 ಅಂಕಗಳೊಂದಿಗೆ ಮಾನಸ ಗಂಗೋತ್ರಿಯಲ್ಲಿ ವಾಣಿಜ್ಯ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದ ಹೆಗ್ಗಳಿಕೆ ಅವರದು. ಇದೀಗ ಫೈನಾನ್ಸ್ ಅಂಡ್ ಟ್ಯಾಕ್ಷೇಶನ್ ವಿಷಯದಲ್ಲಿ ಎನ್ಇಟಿ ಬರೆದು ಉತ್ತೀರ್ಣರಾಗಿದ್ದಾರೆ.
ಕುಬ್ಜತೆ ಎಂಬುದು ದೇಹಕ್ಕಷ್ಟೇ ಸಾಧನೆಗಲ್ಲ ಎಂಬುದನ್ನು ಹೆಜ್ಜೆ ಹೆಜ್ಜೆಗೂ ಸಾಬೀತು ಮಾಡಿರುವ ಸೃಜನಾ, ಸಾಧನೆಗಾಗಿ ಹೊಸ ಹೊಸ ಅವಕಾಶಗಳನ್ನು ಸೃಷ್ಟಿಸಿಕೊಳ್ಳುತ್ತಾರೆ. ಸಿಕ್ಕ ಅವಕಾಶಗಳ ಸದುಪಯೋಗ ಪಡೆಯುವತ್ತ ವಿಚಾರ ಮಾಡುತ್ತಾರೆ.
ಶಿಕ್ಷಣದ ಹಾದಿಯಲ್ಲಿ ಎಲ್ಲೂ ಹಿಂತಿರುಗಿ ನೋಡದ ಅವರು, ಕಾಲೇಜು ಪ್ರಾಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಬೇಕು ಎಂಬ ತುಡಿತದಲ್ಲಿದ್ದಾರೆ. ಇದರೊಂದಿಗೆ ಪಿಹೆಚ್ಡಿ ಮಾಡುವ ಕನಸೂ ಇದೆ. ಜೊತೆಗೆ ಐಎಎಸ್ ಮಾಡಬೇಕು ಎಂಬ ಆಸೆಯೂ ಇದೆ.