ಮೈಸೂರು: ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಜಮೀನ್ದಾರಿ ಪದ್ಧತಿಯನ್ನು ಮತ್ತೆ ತರಲು ಸರ್ಕಾರ ಮುಂದಾಗಿದೆ ಎಂದು ಮಾಜಿ ಸಂಸದ ಆರ್. ಧ್ರುವನಾರಾಯಣ ಆರೋಪಿಸಿದರು.
ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿ, ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಜಾರಿಗೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬಡವರ ಭೂಮಿಗಾಗಿ ಶಿಕಾರಿಪುರದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡಿದ್ದರು. ಆದರೆ ಈಗ ಅದೇ ಯಡಿಯೂರಪ್ಪನವರು ಸಿಎಂ ಆಗಿದ್ದರೂ ಒತ್ತಡಗಳಿಗೆ ಮಣಿಯುತ್ತಿದ್ದಾರೆ ಎಂದು ಟೀಕಿಸಿದರು.
ದೇವರಾಜ ಅರಸು ಅವರು ರೈತರಿಗೆ ಅನುಕೂಲವಾಗಲೆಂದು ಭೂ ಸುಧಾರಣೆ ಕಾಯ್ದೆ ತಂದರು. ಆದರೆ, ಯಡಿಯೂರಪ್ಪನವರು ರೈತರಿಗೆ ಸಂಕಷ್ಟ ತಂದಿಡಲು ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿದ್ದಾರೆ. ಈ ಕಾಯ್ದೆ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ರಾಜ್ಯವ್ಯಾಪಿ ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು.
ಚುನಾವಣೆಗಳಲ್ಲಿ ಸೋಲು-ಗೆಲುವು ಸಹಜ. ಆದರೆ, ಸಂಸದ ಶ್ರೀನಿವಾಸ್ ಪ್ರಸಾದ್ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಿದ್ದೀವಿ ಎಂದು ಹೇಳುತ್ತಿದ್ದಾರೆ. ಸೋಲು-ಗೆಲುವನ್ನು ಜನರು ನಿಶ್ಚಯಿಸುತ್ತಾರೆ. ಹಾಗಾಗಿ ಶ್ರೀನಿವಾಸ ಪ್ರಸಾದ್ ಅವರ ಹೇಳಿಕೆಯನ್ನು ಖಂಡಿಸುತ್ತೇವೆ ಎಂದರು.
ಕೋವಿಡ್-19ಗೆ ಸಂಬಂಧಿಸಿದ ಪರಿಕರಗಳ ಖರೀದಿಯಲ್ಲಾಗಿದೆ ಎನ್ನಲಾದ ಭ್ರಷ್ಟಾಚಾರವನ್ನು ಪ್ರಶ್ನಿಸುವುದು ಪ್ರತಿಪಕ್ಷದ ಕೆಲಸ. ಭ್ರಷ್ಟಾಚಾರ ನಡೆದಿಲ್ಲವೆಂದರೆ ರಾಜ್ಯ ಸರ್ಕಾರ ಲೆಕ್ಕ ಕೊಡಲಿ ಎಂದು ಧ್ರುವನಾರಾಯಣ ಆಗ್ರಹಿಸಿದರು.