ಮೈಸೂರು: ಲಾಕ್ಡೌನ್ ಘೋಷಣೆಯಾದಾಗಿನಿಂದ ಏನಾದರು ಕಾರಣ ಹೇಳಿ ಬರುವ ಬೈಕ್ ಹಾಗೂ ವಿವಿಧ ವಾಹನಗಳ ಸವಾರರಿಗೆ ಮುಂದೊಂದು ದಿನ ಜೇಬಿಗೆ ಸರಿಯಾಗಿ ಕತ್ತರಿ ಬೀಳಲಿದೆ.
ಮೈಸೂರಿನ ಎಲ್ಲಾ ವೃತ್ತಗಳಲ್ಲಿ ಅಳವಡಿಸಿರುವ ಸಿಸಿಟಿವಿಗಳ ದೃಶ್ಯಗಳ ಮೇಲೆ ಮೊಬೈಲ್ ಕಮಾಂಡ್ ಸೆಂಟರ್ನವರು ನಿಗಾ ವಹಿಸಿದ್ದಾರೆ. ಹೆಲ್ಮೆಟ್ ಧರಿಸದೇ ಬೈಕ್ನಲ್ಲಿ ಓಡಾಡುವ, ಕಾರಿನಲ್ಲಿ ಸೀಟ್ ಬೆಲ್ಟ್ ಹಾಕದೇ ಹೋಗುವ ದೃಶ್ಯಗಳು ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗುತ್ತಿದ್ದು, ಈ ದೃಶ್ಯಗಳು ಮೊಬೈಲ್ ಕಮಾಂಡ್ ಸೆಂಟರ್ಗೆ ರವಾನೆಯಾಗುತ್ತಿವೆ.
ಸಿಸಿಟಿವಿ ಕ್ಯಾಮರಾಗಳಲ್ಲಿ ಕಾನೂನು ಉಲ್ಲಂಘನೆ ಮಾಡುವ, ಪೊಲೀಸರೊಂದಿಗೆ ಕಿರಿಕ್ ಮಾಡುವ, ಅನಗತ್ಯವಾಗಿ ಓಡಾಡುವ ವಾಹನಗಳ ಸಂಖ್ಯೆಗಳನ್ನು ಮೊಬೈಲ್ ಕಮಾಂಡ್ ಸೆಂಟರ್ ಸಿಬ್ಬಂದಿ ನೋಟ್ ಮಾಡಿಕೊಳ್ಳುತ್ತಿದ್ದಾರೆ. ಕೊರೊನಾ ಅವಾಂತರ ಮುಗಿದ ಮೇಲೆ ಮತ್ತೆ ವಾಹನಗಳ ತಪಾಸಣೆಗಿಳಿಯುವ ಸಂಚಾರ ಪೊಲೀಸರು, ಲಾಕ್ಡೌನ್ ಸಮಯದಲ್ಲಿ ಕಾನೂನು ಉಲ್ಲಂಘಿಸಿದ ವಾಹನ ಸವಾರರಿಗೆ ಜೇಬಿಗೆ ಸರಿಯಾಗಿ ಕತ್ತರಿ ಹಾಕಲಿದ್ದಾರೆ.