ಮೈಸೂರು : ಕೆ.ಆರ್. ಆಸ್ಪತ್ರೆ, ಬಾಲಮಂದಿರದ ಅಧಿಕಾರಿಗಳು ಮತ್ತು ಸಿಬ್ಬಂದಿಯ ವಿರುದ್ದ ಉಪ ಲೋಕಾಯುಕ್ತ ಘಣೀಂದ್ರ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ಶಿಸ್ತು ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತ ಎಸ್ಪಿಗೆ ಸೂಚಿಸಿದ್ದಾರೆ. ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸದಿರುವ ಹಾಗೂ ಇನ್ನಿತರ ಪ್ರಮುಖ ಸಮಸ್ಯೆಗಳನ್ನು ಅರಿತು ಕರ್ತವ್ಯಲೋಪವನ್ನು ಗಮನಿಸಿದ ಹಿನ್ನೆಲೆಯಲ್ಲಿ 12 ಮಂದಿ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಲು ನಿರ್ಧರಿಸಲಾಗಿದೆ.
ನಗರದ ಕೆ.ಆರ್. ಆಸ್ಪತ್ರೆಗೆ ಉಪ ಲೋಕಾಯುಕ್ತ ಕೆ.ಎಂ. ಘಣೀಂದ್ರ ಭೇಟಿ ನೀಡಿದ ಸಂದರ್ಭದಲ್ಲಿ ಆಸ್ಪತ್ರೆ ನಿರ್ವಹಣೆಯಲ್ಲಿ ಹಲವು ಲೋಪಗಳು ಕಂಡುಬಂದಿದ್ದವು. ರೋಗಿಗಳೂ ಸಹ ತಮಗಾಗುತ್ತಿರುವ ತೊಂದರೆಗಳ ಬಗ್ಗೆ ಅಳಲು ತೋಡಿಕೊಂಡಿದ್ದರು. ಈ ಸಂಬಂಧ ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ. ಎಚ್.ಪ್ರಸಾದ್, ಆಸ್ಪತ್ರೆಯ ಸೂಪರಿಂಟೆಂಡೆಂಟ್ ನಂಜುಂಡಸ್ವಾಮಿ, ವೈದ್ಯಾಧಿಕಾರಿ ರಾಜೇಂದ್ರ ಕುಮಾರ್ ಸೇರಿದಂತೆ ಹನ್ನೆರಡು ಮಂದಿ ಅಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಕೈಗೊಳ್ಳುವಂತೆ ಲೋಕಾಯುಕ್ತ ಎಸ್ಪಿಗೆ ಅವರು ಸೂಚನೆ ನೀಡಿದ್ದಾರೆ.
ಘಟನೆಯ ಹಿನ್ನೆಲೆ ಹೀಗಿದೆ..: ಉಪ ಲೋಕಾಯುಕ್ತರು ಜೂನ್ 17ರಿಂದ 19 ರವರೆಗೆ ಮೈಸೂರು ಪ್ರವಾಸದಲ್ಲಿದ್ದ ವೇಳೆ ಕೆ.ಆರ್. ಆಸ್ಪತ್ರೆಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡಿರುವುದು, ಸ್ವಚ್ಚತಾ ನಿರ್ವಹಣೆ ಇಲ್ಲದೇ ಇರುವುದು, ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡದಿರುವುದು, ಸರಿಯಾದ ರೀತಿಯಲ್ಲಿ ಶೌಚಾಲಯಗಳ ನಿರ್ವಹಣೆ ಮಾಡದೇ ಇರುವುದು. ರೋಗಿಗಳಿಗೆ ಹೊರಗಿನಿಂದ ಔಷಧಿ ತರಲು ಹೇಳುತ್ತಾರೆ ಎಂದು ರೋಗಿಗಳು ಉಪ ಲೋಕಾಯುಕ್ತರ ಬಳಿ ದೂರಿದ್ದರು ಎಂದು ಉಪ ಲೋಕಾಯುಕ್ತರು ತಮ್ಮ ಆದೇಶದಲ್ಲಿ ಉಲ್ಲೇಖಿಸಿದ್ದರು.
ಆಸ್ಪತ್ರೆ ಸಿಬ್ಬಂದಿಯಿಂದ ಲಂಚಕ್ಕೆ ಬೇಡಿಕೆ ಆರೋಪ: ಕೆ.ಆರ್. ಆಸ್ಪತ್ರೆಗೆ ಮೈಸೂರು ಜಿಲ್ಲೆಯ ಸುತ್ತಮುತ್ತಲಿನಿಂದ ಹಲವು ರೋಗಿಗಳು ಬರುತ್ತಾರೆ. ಸರಕಾರಿ ಆಸ್ಪತ್ರೆ, ಉತ್ತಮ ಗುಣಮಟ್ಟದ ಚಿಕಿತ್ಸೆ ಸಿಗಬೇಕು. ರೋಗಿಗಳಿಗೆ ಇಲ್ಲಿ ಎಲ್ಲ ರೀತಿಯ ಅನುಕೂಲತೆಗಳಿವೆ. ಆದರೆ ಆಸ್ಪತ್ರೆಯ ಕೆಲವು ಸಿಬ್ಬಂದಿ ಚಿಕಿತ್ಸೆ ನೀಡಲು ಹಾಗೂ ಇನ್ನಿತರ ಕಾರಣಗಳಿಗೆ ಬರುವ ರೋಗಿಗಳಿಂದ ಲಂಚಕ್ಕೆ ಬೇಡಿಕೆ ಇಡುತ್ತಾರೆ ಎಂದು ರೋಗಿಗಳು ತಮಗೆ ದೂರು ನೀಡಿದ್ದಾರೆ ಎಂದು ಉಪ ಲೋಕಾಯುಕ್ತರು ತಿಳಿಸಿದ್ದರು.
ಚೆಲುವಾಂಬ ಆಸ್ಪತ್ರೆ ಸಹ ಸರಿಯಾದ ನಿರ್ವಹಣೆ ಹೊಂದಿಲ್ಲ. ವಿವಿಧ ಪರೀಕ್ಷೆಗಳಿಗೆ ಖಾಸಗಿ ಕೇಂದ್ರಗಳಿಗೆ ವೈದ್ಯರು ಚೀಟಿ ಬರೆದುಕೊಡುತ್ತಿದ್ದಾರೆ. ಹೀಗೆ ಖಾಸಗಿ ಲ್ಯಾಬ್‌ಗಳಿಗೆ ರೋಗಿಗಳು ನೀಡಿರುವ ಹಣವನ್ನು ಅವರಿಗೆ ಮರುಸಂದಾಯ ಮಾಡಿಕೊಡಬೇಕು ಎಂದು ಉಪ ಲೋಕಾಯುಕ್ತರು ಕೆ.ಆರ್. ಆಸ್ಪತ್ರೆಯ ಸೂಪರಿಂಟೆಂಡೆಂಟ್ ದ್ರಾಕ್ಷಾಯಿಣಿ ಅವರಿಗೆ ಸೂಚನೆ ನೀಡಿದ್ದರು.
ಬಾಲ ಮಂದಿರದ ವಿದ್ಯಾರ್ಥಿಗಳಿಂದ ದೂರುಗಳ ಸುರಿಮಳೆ : ಉಪ ಲೋಕಾಯುಕ್ತರು ಕೆ.ಆರ್. ಆಸ್ಪತ್ರೆಗೆ ಭೇಟಿ ನೀಡಿದ ನಂತರ ಜೂನ್ 18ರಂದು ಬಾಲಮಂದಿರಕ್ಕೂ ಭೇಟಿ ನೀಡಿದ್ದರು. ಅಲ್ಲಿನ ಕುಂದುಕೊರತೆಗಳನ್ನು ಪರಿಶೀಲಿಸಿದ್ದರು. ಆ ಸಂದರ್ಭದಲ್ಲಿ ವಿದ್ಯಾರ್ಥಿಗಳು ಬಾಲಮಂದಿರವನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುತ್ತಿಲ್ಲ ಎಂದು ದೂರಿದ್ದರು. ವಿದ್ಯಾರ್ಥಿಗಳಿಗೆ ಶುದ್ಧ ಆಹಾರ ಒದಗಿಸದೇ ಇರುವುದು, ಮಕ್ಕಳನ್ನು ಶಾಲಾ-ಕಾಲೇಜುಗಳಿಗೆ ಸೇರಿಸದೇ ಇರುವುದು, ಖಾಲಿ ಹಾಳೆಯ ಮೇಲೆ ಸಹಿ ಹಾಕಿಸಿಕೊಂಡು ಬೇಕಾದ ರೀತಿಯಲ್ಲಿ ಹೇಳಿಕೆ ಪಡೆಯುತ್ತಾರೆ ಎಂದೆಲ್ಲ ವಿದ್ಯಾರ್ಥಿಗಳು ಬೇಸರ ಹೊರಹಾಕಿದ್ದರು. ಅಲ್ಲದೇ ಮಕ್ಕಳನ್ನು ಪೋಷಕರು ನೋಡಲು ಬಂದಾಗ ಅವರ ಭೇಟಿಗೆ ನಿರಾಕರಿಸುವುದು, ಭೇಟಿ ಮಾಡಿಸಲು ಪೋಷಕರ ಬಳಿ ಲಂಚ ಪಡೆಯುವುದು, ಮಕ್ಕಳಿಗೆ ಆಟದ ಪರಿಕರಗಳನ್ನು ನೀಡದೇ ಇರುವುದು, ಮಕ್ಕಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಬೆತ್ತದಿಂದ ಥಳಿಸುವುದು, ಕೊಟ್ಟ ಸಾಮಗ್ರಿಗಳನ್ನು ಕದಿಯುವುದೂ ಸೇರಿದಂತೆ ಹಲವು ದೂರುಗಳನ್ನು ನೀಡಿದ್ದರು.
ಹೀಗಾಗಿ, ಕರ್ತವ್ಯಲೋಪ ಎಸಗಿದ ಆರೋಪದಡಿ ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪ ನಿರ್ದೇಶಕ ಬಸವರಾಜು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಯೋಗೇಶ್, ಬಾಲಕಿಯರ ಮಂದಿರದ ಸೂಪರಿಂಟೆಂಡೆಂಟ್ ಶಾರದಾದೇವಿ ಹಾಗೂ ಅಧಿಕಾರಿಗಳಾದ ಲತಾ, ಜಯಂತಿ, ಬಾಲಮಂದಿರದ ಸೂಪರಿಂಟೆಂಡೆಂಟ್ ಗುರುಮೂರ್ತಿ, ಮೋಹನ್ ಎಂಬವರ ವಿರುದ್ಧ ಉಪಲೋಕಾಯುಕ್ತ ಘಣೀಂದ್ರ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ : ನಾರ್ಮಲ್ ಹೆರಿಗೆಗಳನ್ನೇ ಮಾಡಿಸಿ, ಅನಿವಾರ್ಯತೆ ಇದ್ದರೆ ಮಾತ್ರ ಸಿಜೇರಿಯನ್ ಮಾಡಿ: ವೈದ್ಯರಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಲಹೆ