ಮೈಸೂರು: ಅಂತರ್ಜಾತಿ ಯುವಕನನ್ನು ಪ್ರೀತಿ ಮಾಡಿದ ಕಾರಣಕ್ಕೆ ಹೆತ್ತವರೇ ಅಪ್ರಾಪ್ತ ಮಗಳನ್ನ ಕೊಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ತಾಲೂಕಿನ ಕಗ್ಗುಂಡಿ ಗ್ರಾಮದ ಸುರೇಶ್ ಹಾಗೂ ಬೇಬಿ ದಂಪತಿಯ ಪುತ್ರಿ ಕೊಲೆಯಾದ ದುರ್ದೈವಿ.
ಮೃತ ಬಾಲಕಿ ಪಕ್ಕದ ಗ್ರಾಮದ ಯುವಕ ಮಂಜು ಎಂಬಾತನನ್ನ ಪ್ರೀತಿಸುತ್ತಿದ್ದಳಂತೆ. ಇವರಿಬ್ಬರ ಪ್ರೀತಿಗೆ ಪೋಷಕರು ವಿರೋಧ ವ್ಯಕ್ತ ಪಡಿಸಿದ್ದರು. ಕೆಲದಿನಗಳ ಹಿಂದೆ ಪ್ರೇಮಿಗಳು ಮದುವೆಯಾಗಲು ನಿರ್ಧರಿಸಿ ಪ್ರಿಯಕರನಿಗಾಗಿ ಬಾಲಕಿ ಮನೆ ಬಿಟ್ಟಿದ್ದಳು. ಇದೇ ವಿಚಾರ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು, ಈ ವೇಳೆ, ಪೊಲೀಸರ ಮುಂದೆ ಬಾಲಕಿ ಮನೆಗೆ ಹೋಗುವುದಿಲ್ಲ ಎಂದು ಹಠ ಹಿಡಿದಿದ್ದಳು. ಇನ್ನು ಅಪ್ರಾಪ್ತೆಯಾದ್ದರಿಂದ ಬಾಲಮಂದಿರದಲ್ಲಿ ಇರಿಸಲಾಗಿತ್ತು.
ಇತ್ತೀಚೆಗೆ ಶಾಲಿನಿಯನ್ನು ಪೋಷಕರು ಆಕೆಯ ಮನವೊಲಿಸಿ ಮನೆಗೆ ಕರೆತಂದಿದ್ದರು. ಆದರೆ, ಇದೀಗ ಗ್ರಾಮದ ಜಮೀನೊಂದರಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಅಂತರ್ಜಾತಿ ಹುಡುಗನ ಪ್ರೀತಿಸಿದ ತಪ್ಪಿಗಾಗಿ ಮರ್ಯಾದಾ ಹತ್ಯೆ ನಡೆದಿದೆಯಾ ಎನ್ನುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಪಿರಿಯಾಪಟ್ಟಣ ಠಾಣೆಯ ಪೊಲೀಸರು ಶಾಲಿನಿಯ ತಂದೆ ಸುರೇಶ್ ಹಾಗೂ ತಾಯಿ ಬೇಬಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಹಿರಿಯ ನಾಗರಿಕರು ಸರ್ಕಾರಿ ಕಚೇರಿಗೆ ಬಂದಾಗ ಗೌರವದಿಂದ ವರ್ತಿಸಿ: ಇಲಾಖೆ ಎಚ್ಚರಿಕೆ