ಮೈಸೂರು: ಪೌರತ್ವ ಕಾಯ್ದೆ ಪ್ರತಿಭಟನೆ ವಿಚಾರವಾಗಿ ಕೆಲವರಿಗೆ ಬೆಂಕಿ ಹಚ್ಚುವ ಮತ್ತು ಹಚ್ಚಿಸುವ ಮನಸ್ಥಿತಿ ಇರುತ್ತದೆ ಎಂದು ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್ ಕಿಡಿಕಾರಿದರು.
ಜಿಲ್ಲೆಯ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷದಲ್ಲಿನ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಈ ಕೆಲಸ ಮಾಡುತ್ತಿದ್ದಾರೆ. ಆದರೆ ಜನರು ಇದನ್ನೆಲ್ಲ ತಿರಸ್ಕರಿಸುತ್ತಿದ್ದಾರೆ. ಎಲ್ಲಾ ಭಾರತೀಯರು ಸ್ವಾಗತಿಸಬೇಕಾದ ಕಾನೂನನ್ನು ಹೀಗೆ ಪ್ರತಿಭಟನೆ ಮೂಲಕ ಗೊಂದಲ ಮೂಡಿಸುತ್ತಿರುವುದು ಸರಿಯಲ್ಲ ಎಂದರು.
ಇನ್ನು, ಯಾವ ಹುದ್ದೆ, ಸ್ಥಾನವೂ ಶಾಶ್ವತವಲ್ಲ ಎಂದು ಹೇಳಿ, ಡಿಸಿಎಂ ಸ್ಥಾನದ ಬಗ್ಗೆ ಪಕ್ಷದಲ್ಲಿನ ಕೆಲವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಅದರಿಂದ ನಮಗೆ ಮುಜುಗರವಾಗಿಲ್ಲ. ಎಲ್ಲರಿಗೂ ಅವರದ್ದೇ ಆದ ಅಭಿಪ್ರಾಯ ಇರುತ್ತೆ. ತಮಗೆ ಆ ಸ್ಥಾನ ಸಿಕ್ಕಿಲ್ಲ ಅಂತ ಮಾತನಾಡಿರಬಹುದು ಎಂದು ಅಶ್ವಥ್ ನಾರಾಯಣ ಹೇಳಿದ್ರು.
ಇನ್ನು, ಡಿಸಿಎಂ ಸ್ಥಾನಗಳು ಮುಂದುವರಿಯುವುದು, ಬಿಡುವುದು ಮುಖ್ಯಮಂತ್ರಿಗೆ ಬಿಟ್ಟಿದ್ದು. ಸಚಿವ ಸಂಪುಟ ವಿಸ್ತರಣೆ ಕುರಿತಾಗಿಯೂ ಮುಖ್ಯಮಂತ್ರಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.