ಮೈಸೂರು: ಜಿಲ್ಲೆಯಲ್ಲಿ ನಡೆಸಲಾಗಿರುವ ಕೊರೊನಾ ಪರೀಕ್ಷೆಗಳು, ಖಾಸಗಿ ಆಸ್ಪತ್ರೆ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಬೆಡ್‌ಗಳು ಹಾಗೂ ರೋಗಿಗಳಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಕಳೆದ 20-25 ದಿನಗಳಲ್ಲಿ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ ಶೇ 2 ರಿಂದ ಶೇ 1.5 ಕ್ಕೆ ಇಳಿದಿದೆ. ನಮ್ಮ ಜಿಲ್ಲೆಯಲ್ಲಿ ಪ್ರತಿದಿನ 4,000 ದಿಂದ 5,000 ಜನರಿಗೆ ಟೆಸ್ಟಿಂಗ್ ಮಾಡುತ್ತಿದ್ದೇವೆ. ರೋಗಿಗಳ ಸ್ವಾಬ್ ಟೆಸ್ಟಿಂಗ್ ಮಾಡಿದ ಮೇಲೆ ಅದನ್ನು ಲ್ಯಾಬ್ ಕಳುಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ನಮ್ಮಲ್ಲಿ ಮೈಸೂರು ಮೆಡಿಕಲ್ ಕಾಲೇಜು ಹಾಗೂ ಸಿ.ಎಫ್.ಟಿ.ಆರ್.ಐನಲ್ಲಿ ಮಾತ್ರ ಸ್ವಾಬ್ ಟೆಸ್ಟಿಂಗ್ ಲ್ಯಾಬ್ ಲಭ್ಯವಿದೆ. ಎರಡು ಲ್ಯಾಬ್‌ನಲ್ಲಿ 1,500 ಟೆಸ್ಟ್ ಮಾತ್ರ ಮಾಡಲು ಆಗುತ್ತಿದ್ದು, ಉಳಿದದ್ದು ಬೆಂಗಳೂರು ಲ್ಯಾಬ್‌ಗೆ ಕಳುಹಿಸುತ್ತೇವೆ. ಇಲ್ಲಿಯವರೆಗೆ ಟೆಸ್ಟಿಂಗ್ ರಿಪೋರ್ಟ್ ತಡವಾಗಿ ಬರುತ್ತಿರುವ ಕುರಿತು ದೂರುಗಳು ಬಂದಿದೆ. ಆದ್ದರಿಂದ, ನಾವು ಜಿಲ್ಲೆಯಲ್ಲೇ ಟೆಸ್ಟಿಂಗ್ ಲ್ಯಾಬ್ ಮಾಡಬೇಕು ಎಂದು ಆರೋಗ್ಯ ಸಚಿವರಿಗೆ ಮನವಿ ಮಾಡಿದ್ದೇವೆ ಎಂದರು.
ನಮ್ಮ ಎಂ.ಎಂ.ಸಿ.ಆರ್.ಐನಲ್ಲಿ ಲಿಕ್ವಿಡ್ ಹ್ಯಾಂಡ್ ಲೀಗ್ ಸಿಸ್ಟಮ್ ಇದೆ. ಈ ಮೂಲಕ 24 ಗಂಟೆಯೊಳಗೆ 4,000 ಜನರ ಲ್ಯಾಬ್ ಟೆಸ್ಟ್ ರಿಪೋರ್ಟ್ ಕೊಡಬಹುದು. ಇದರಲ್ಲಿ 2 ವಿಧವಾದ ಟೆಸ್ಟ್‌ಗಳಿವೆ. ಮೊದಲನೆಯದಾಗಿ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್. ಇದರಲ್ಲಿ 20 ನಿಮಿಷದೊಳಗೆ ಫಲಿತಾಂಶ ಬರುತ್ತದೆ. ಆದರೆ, ಇದು ಶೇ 100ರಷ್ಟು ಗ್ಯಾರಂಟಿ ಇರಲ್ಲ. ಸರ್ಕಾರದ ಅದೇಶದಂತೆ ನಾವು 24 ಗಂಟೆಯೊಳಗೆ ಫಲಿತಾಂಶ ಕೊಡಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 1,292 ಬೆಡ್‌ಗಳು ಲಭ್ಯವಿದ್ದು, ಅದರಲ್ಲಿ ಆಕ್ಸಿಜನ್ ಬೆಡ್ಗಳ ಸಂಖ್ಯೆ 211 ಇದೆ. ಹಾಗೆಯೇ, 53 ವೆಂಟಿಲೇಟರ್ ಬೆಡ್ಗಳ ಲಭ್ಯತೆ ಇದೆ. ತಾಲ್ಲೂಕು ಮಟ್ಟದಲ್ಲಿ 50-50 ಆಕ್ಸಿಜನ್ ಬೆಡ್ ರೆಡಿ ಮಾಡುತ್ತಿದ್ದೇವೆ.
ಖಾಸಗಿ ಆಸ್ಪತ್ರೆಗಳಲ್ಲಿನ ಜನರಲ್ ವಾರ್ಡ್‌ಗೆ 10,000 ರೂ, ಹೆಚ್.ಡಿ.ಒಗೆ 12.000 ರೂ ಹಾಗು ಐಸೋಲೇಷನ್ ವೆಂಟಿಲೇಟರ್ 25,000 ರೂ ಮಾತ್ರ ಚಾರ್ಜ್ ಮಾಡಬಹುದು. ಇದಕ್ಕಿಂತ ಹೆಚ್ಚಿಗೆ ಚಾರ್ಜ್ ಮಾಡುವ ಹಾಗಿಲ್ಲ. ಒಂದು ವೇಳೆ ಅಧಿಕ ಹಣ ಪಡೆದರೆ ನಾವು ರೀಫಂಡ್ ಮಾಡಿಸುತ್ತೇವೆ ಎಂದು ಭರವಸೆ ನೀಡಿದರು.
ಕೊರೊನಾ ನಿಯಂತ್ರಣಕ್ಕೆ ಸರ್ಕಾರದ ಮಟ್ಟದಿಂದ ಏನೇನು ಸಿದ್ದತೆ ಮಾಡಬೇಕೋ ಎಲ್ಲವನ್ನೂ ಮಾಡುತ್ತಿದ್ದೇವೆ. ಪೂರ್ತಿಯಾಗಿ ಕೋವಿಡ್ ಮುಕ್ತ ಜಿಲ್ಲೆಯಾಗಬೇಕಾದರೆ ಸಾರ್ವಜನಿಕರ ಸಹಕಾರ ಬೇಕು ಎಂದು ಡಿಸಿ ಹೇಳಿದರು.