ಮೈಸೂರು: ಬೆಳಗ್ಗೆ ಚಾಮುಂಡಿ ಬೆಟ್ಟದಲ್ಲಿ 7-45ರಿಂದ 8-15 ರೊಳಗಿನ ಶುಭ ಮುಹೂರ್ತದಲ್ಲಿ ನಾಡ ದೇವತೆ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ವಿಧ್ಯುಕ್ತವಾಗಿ ದಸರಾ ಮಹೋತ್ಸವದ ಉದ್ಘಾಟನೆ ನೆರವೇರಿಸಲಾಗುತ್ತದೆ.
ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ. ಎನ್. ಮಂಜುನಾಥ್ ಈ ಬಾರಿಯ ಸರಳ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿಎಂ ಬಿ.ಎಸ್ ಯಡಿಯೂರಪ್ಪ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಹಾಗೂ ಮೈಸೂರು ಭಾಗದ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಈ ಬಾರಿ ಮೈಸೂರು ದಸರಾ ಮಹೋತ್ಸವವನ್ನು ಸರಳವಾಗಿ ಆಚರಿಸಲು ನಿರ್ಧರಿಸಿರುವುದರಿಂದ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶನ್ನು ನಿರ್ಬಂಧಿಸಲಾಗಿದೆ. ಕೋವಿಡ್ ಮುಂಜಾಗ್ರತಾ ಕ್ರಮಗಳೊಂದಿಗೆ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇವಲ 200 ಮಂದಿ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ.