ಮೈಸೂರು : ಈ ಬಾರಿಯ ನಾಡಹಬ್ಬ ದಸರಾಗೆ ಗಜಪಯಣದ ಮೂಲಕ ಆರಂಭಿಕ ಮುನ್ನುಡಿ ಬರೆಯಲಾಗುತ್ತಿದೆ. ಸೆಪ್ಟೆಂಬರ್ 1 (ಶುಕ್ರವಾರ) ನಾಗರಹೊಳೆಯ ಹೆಬ್ಬಾಗಿಲು ವೀರನಹೊಸಳ್ಳಿಯ ಬಳಿ ಅಭಿಮನ್ಯು ನೇತೃತ್ವದ 9 ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ಗಜಪಯಣಕ್ಕೆ ಚಾಲನೆ ಸಿಗಲಿದೆ.
ಶುಕ್ರವಾರ ಬೆಳಗ್ಗೆ 9:45 ರಿಂದ 10:15ರ ತುಲಾ ಲಗ್ನದಲ್ಲಿ ಗಜಪಡೆಗೆ ಸಾಂಪ್ರದಾಯಿಕ ಪೂಜೆಯನ್ನು ಸಲ್ಲಿಸಲಾಗುವುದು. ಬಳಿಕ ಅರಣ್ಯ ಭವನದಲ್ಲಿ ವಾಸ್ತವ್ಯ ಹೂಡಲಿರುವ ಗಜಪಡೆಯನ್ನು ಸೆಪ್ಟೆಂಬರ್ 4 ರಂದು ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಅರಮನೆಗೆ ಸ್ವಾಗತಿಸಲಾಗುವುದು. ಈ ಕಾರ್ಯಕ್ರಮಕ್ಕೆ ಸಚಿವರಾದ ಡಾ. ಎಚ್ ಸಿ ಮಹಾದೇವಪ್ಪ, ಈಶ್ವರ ಖಂಡ್ರೆ, ಕೆ. ವೆಂಕಟೇಶ್ ಹಾಗೂ ಶಿವರಾಜ್ ಸಂಗಪ್ಪ ತಂಗಡಗಿ ಭಾಗವಹಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಹುಣಸೂರು ಶಾಸಕ ಜಿ ಡಿ ಹರೀಶ್ ಗೌಡ ವಹಿಸಲಿದ್ದಾರೆ.
ಗಜಪಯಣದ ಕಾರ್ಯಕ್ರಮಕ್ಕಾಗಿ ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ನಾಗರಹೊಳೆಯ ಹೆಬ್ಬಾಗಿಲಿನಲ್ಲಿ ಕಂಸಾಳೆ, ಡೊಳ್ಳು ಕುಣಿತ, ವೀರಗಾಸೆ, ಪೂಜಾಕುಣಿತ, ಆದಿವಾಸಿ ಮಕ್ಕಳ ನೃತ್ಯ ಸೇರಿದಂತೆ ಹತ್ತಕ್ಕೂ ಹೆಚ್ಚಿನ ಕಲಾತಂಡಗಳು ಗಜಪಡೆಯ ಮುಂಭಾಗದಲ್ಲಿ ಪ್ರದರ್ಶನ ನೀಡಲಿವೆ. ಇದೇ ಸಂದರ್ಭದಲ್ಲಿ ತುಲಾ ಲಗ್ನದಲ್ಲಿ ಗಜಪಡೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಗಜಪಯಣಕ್ಕೆ ಚಾಲನೆ ನೀಡಲಾಗುವುದು. ನಂತರ ಶಾಲಾ ಆವರಣದಲ್ಲಿ ವೇದಿಕೆ ಸಮಾರಂಭ ನಡೆಯಲಿದೆ.
ಅಭಿಮನ್ಯು ನೇತೃತ್ವದ 9 ಗಜಪಡೆ : ಗಜಪಯಣದ ಮೊದಲ ತಂಡದಲ್ಲಿ ಅಂಬಾರಿಯನ್ನು ಹೊರಲಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 9 ಆನೆಗಳು ಆಗಮಿಸಲಿವೆ. ಇದರಲ್ಲಿ ಎರಡು ಹೆಣ್ಣಾನೆಗಳು ಸೇರಿವೆ. ಅವುಗಳಲ್ಲಿ ಮತ್ತಿಗೋಡು ಆನೆ ಶಿಬಿರದಿಂದ ಕ್ಯಾಪ್ಟನ್ ಅಭಿಮನ್ಯು, ಮಹೇಂದ್ರ, ಬಳ್ಳೆ ಆನೆ ಶಿಬಿರದಿಂದ ಅರ್ಜುನ, ಭೀಮನಕಟ್ಟೆ ಆನೆ ಶಿಬಿರದಿಂದ ವರಲಕ್ಷ್ಮಿ, ದುಬಾರೆ ಆನೆ ಶಿಬಿರದಿಂದ ಧನಂಜಯ, ಗೋಪಿ ಹಾಗೂ ಹೆಣ್ಣಾನೆ ವಿಜಯಾ, ರಾಂಪುರ ಆನೆ ಶಿಬಿರದಿಂದ ಪಾರ್ಥಸಾರಥಿ, ರೋಹಿತ್, ಹಿರಣ್ಯಾ ಮೊದಲ ಹಂತದ ಗಜಪಯಣದಲ್ಲಿ ಭಾಗವಹಿಸಲಿವೆ.
ಗಜಪಯಣದ ನಂತರ ಲಾರಿಗಳ ಮೂಲಕ ಮೈಸೂರಿಗೆ ಆಗಮಿಸುವ ಗಜಪಡೆಗಳು ಮೂರು ದಿನ ಅರಣ್ಯ ಭವನದಲ್ಲಿ ವಾಸ್ತವ್ಯ ಹೂಡಿ, ನಂತರ ಸೆಪ್ಟೆಂಬರ್ 4 ರಂದು ಜಯಮಾರ್ತಾಂಡ ದ್ವಾರದ ಬಳಿ, ಜಿಲ್ಲಾಡಳಿತ ಹಾಗೂ ಅರಮನೆಯ ಆಡಳಿತ ಮಂಡಳಿಯ ವತಿಯಿಂದ ಸಾಂಪ್ರದಾಯಿಕ ಸ್ವಾಗತ ಮಾಡಿ, ಅರಮನೆಗೆ ಪ್ರವೇಶ ಮಾಡಲಿವೆ. ಅಲ್ಲಿಂದ ಜಂಬೂ ಸವಾರಿಯವರೆಗೆ ತಾಲೀಮು ನಡೆಸಿ, ಜಂಬೂಸವಾರಿಗೆ ಸಿದ್ಧತೆ ನಡೆಸಲಾಗುವುದು ಎಂದು ವನ್ಯಜೀವಿ ವಿಭಾಗದ ಉಪ ಅರಣ್ಯಾಧಿಕಾರಿ ಸೌರವ್ ಕುಮಾರ್ ಈಟಿವಿ ಭಾರತಗೆ ಮಾಹಿತಿ ನೀಡಿದರು.
ರಾಂಪುರ ಶಿಬಿರದ ಆನೆಗಳಿಗೆ ಬೀಳ್ಕೊಡುಗೆ : ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಂಪುರ ಆನೆ ಶಿಬಿರದಿಂದ ಬುಧವಾರ ಗಂಡಾನೆ ರೋಹಿತ್ ಹಾಗೂ ಹೆಣ್ಣಾನೆಯಾದ ಹಿರಣ್ಯಾ ಮದ್ದೂರು ಚೆಕ್ ಪೋಸ್ಟ್ನಿಂದ ಸಾಂಪ್ರಾದಾಯಿಕ ಪೂಜೆ ಅರ್ಪಿಸಿಕೊಂಡು, ಕಬ್ಬು-ಬೆಲ್ಲ ಸೇವಿಸಿ ತೆರಳಿವೆ. ದಸರಾ ಜಂಬೂ ಸವಾರಿಯಲ್ಲಿ ಇವೆರಡು ಆನೆಗಳು ಪಾಲ್ಗೊಳ್ಳಲಿದ್ದು, ಶಾಸಕ ಗಣೇಶ್ ಪ್ರಸಾದ್, ಬಂಡೀಪುರ ಸಿಎಫ್ಒ ಪ್ರಭಾಕರನ್ ಅವರು ಎರಡು ಆನೆಗಳಿಗೆ ಪೂಜೆ ಸಲ್ಲಿಸಿ ಬೀಳ್ಕೊಟ್ಟಿದ್ದಾರೆ.
ಕೊಡಗಿನ ದುಬಾರೆ ಹಾಗೂ ಹಾರಂಗಿ ಆನೆ ಶಿಬಿರಗಳಿಂದ ನಾಲ್ಕು ಆನೆಗಳು ಗುರುವಾರ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಗಜ ಪಡೆಗಳು ಪ್ರಯಾಣ ಆರಂಭಿಸಿದವು. ಈ ಎರಡೂ ಶಿಬಿರಗಳಲ್ಲಿರುವ ಧನಂಜಯ (45), ಕಂಚನ್ (24), ಗೋಪಿ (41) ಹಾಗೂ ವಿಜಯ (63) ಆನೆಗಳು ಹೊರಟಿವೆ.
ಇದನ್ನೂ ಓದಿ : ನಾಡಹಬ್ಬ ದಸರಾ ಉದ್ಘಾಟಿಸಲಿರುವ ಹಂಸಲೇಖ: ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ