ಮೈಸೂರು: ಕಳೆದ ಕೆಲ ದಿನಗಳಿಂದ ಆತಂಕ ಸೃಷ್ಟಿಸಿದ್ದ ಮೊಸಳೆ ಕೊನೆಗೂ ಸಿಕ್ಕಿಬಿದ್ದಿದೆ. ಮೈಸೂರು-ಊಟಿ ರಸ್ತೆಯ ಬಳಿಯಿರುವ ಎಲೆ ತೋಟದ ರಾಮಾನುಜ ರಸ್ತೆ ಬದಿಯ ಮೋರಿಯಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದ ಮೊಸಳೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ನಿನ್ನೆ(ಗುರುವಾರ) ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳೀಯರ ನೆರವಿನಿಂದ ದಿನವಿಡೀ ಕಾರ್ಯಾಚರಣೆ ಮಾಡಿ ಮೊಸಳೆಯನ್ನು ಸೆರೆಹಿಡಿದಿದ್ದಾರೆ. ನ.13 ರಂದು ಮೊಸಳೆ ಕರುವೊಂದನ್ನು ಬಲಿ ಪಡೆದಿದ್ದು, ಸ್ಥಳೀಯರ ಆತಂಕಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ 2 ದಿನಗಳಿಂದ ನಿರಂತರವಾಗಿ ಅರಣ್ಯ ಇಲಾಖೆ ಮತ್ತು ಮೃಗಾಲಯ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದರು.
ಎಲೆ ತೋಟದ ಮೋರಿಯಲ್ಲಿ ಹೆಚ್ಚಿನ ನೀರು ಸಂಗ್ರಹವಾಗಿರುವುದನ್ನು ಗಮನಿಸಿ, ಮೋಟಾರ್ ಪಂಪ್ ಮೂಲಕ ನೀರನ್ನು ತೆರವುಗೊಳಿಸಿ ಮೊಸಳೆ ಓಡಾಡುವ ಕಡೆ ಬಲೆ ಹಾಕಲಾಗಿತ್ತು. ಜತೆಗೆ ಜೆಸಿಬಿ ಬಳಸಿ ಕಾರ್ಯಾಚರಣೆ ಆರಂಭಿಸಿ ನಿನ್ನೆ ಸಂಜೆ ವೇಳೆಗೆ ಮೊಸಳೆಯನ್ನು ಸೆರೆ ಹಿಡಿದಿದ್ದಾರೆ.
ಸೆರೆ ಸಿಕ್ಕ ಮೊಸಳೆಯು 8 ಅಡಿ ಉದ್ದ, 3 ಅಡಿ ದಪ್ಪ ಇದೆ. ಸುಮಾರು 40 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ. ಮೊಸಳೆ ಹಿಡಿಯುವ ಕೆಲಸಕ್ಕೆ ಕೈ ಹಾಕಿ 2 ಬಾರಿ ನಿರಾಸೆ ಹೊಂದಿದ್ದೆವು. ನಿರಂತರ ಶ್ರಮದ ಫಲವಾಗಿ ಮೊಸಳೆಯನ್ನು ಸೆರೆ ಹಿಡಿದಿದ್ದೇವೆ. ಸೆರೆ ಸಿಕ್ಕ ಮೊಸಳೆಯನ್ನು ಕಬಿನಿ ಜಲಾಶಯದ ಹಿನ್ನೀರಿಗೆ ಬಿಡಲಾಗುವುದು ಎಂದು ಆರ್ಎಫ್ಒ ಸುರೇಂದ್ರ 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದರು.
ಇದನ್ನೂ ಓದಿ: ಬಳ್ಳಾರಿ ನಗರದಲ್ಲಿ ಮೊಸಳೆ ಸೆರೆ.. ನಿಟ್ಟಸಿರು ಬಿಟ್ಟ ಜನತೆ