ಮೈಸೂರು: ಅನೈತಿಕ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಸೊಸೆಯನ್ನೇ ಮಾವ ಹೊಡೆದು ಕೊಲೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಮೈಸೂರು ತಾಲೂಕಿನ ಹಾರೋಹಳ್ಳಿ ಗ್ರಾಮದಲ್ಲಿ ಘಂಟಯ್ಯ (70) ಎಂಬುವವರು ತಮ್ಮ ಸೊಸೆಯನ್ನೇ ಕೊಲೆ ಮಾಡಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಹಾರೋಹಳ್ಳಿ ಗ್ರಾಮದ ಘಂಟಯ್ಯ ಅವರ ಪುತ್ರನ ಜೊತೆ 15 ವರ್ಷಗಳ ಹಿಂದೆ ಮಹಿಳೆ ಮದುವೆ ಮಾಡಲಾಗಿತ್ತು. ಕುಟುಂಬ ನಿರ್ವಹಣೆಗೆ ಗಂಡನ ದುಡಿಮೆ ಸಾಲದು ಎಂಬ ಕಾರಣದಿಂದ ಕವಿತಾ, ಖಾಸಗಿ ಕಾಲೇಜಿನಲ್ಲಿ ಆಯಾ ಕೆಲಸಕ್ಕೆ ಸೇರಿದ್ದರು. ಇದು ಮಾವ ಘಂಟಯ್ಯನಿಗೆ ಇಷ್ಟವಾಗುತ್ತಿರಲಿಲ್ಲ. ಕೆಲಸಕ್ಕೆ ಹೋಗದಂತೆ ಗಲಾಟೆ ಮಾಡುತ್ತಿದ್ದರು. ಅಲ್ಲದೇ, ಸೊಸೆಯ ಮೇಲೆ ಸಂಶಯಪಟ್ಟು ಆಗಾಗ ಮನೆಯಲ್ಲಿ ಜಗಳ ಮಾಡುತ್ತಿದ್ದರು. ಇದೇ ಅನುಮಾನದಿಂದ ಜಗಳದ ವೇಳೆ ಸೊಸೆಯ ತಲೆಯ ಭಾಗಕ್ಕೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶೀಲ ಶಂಕಿಸಿ ಪತ್ನಿಯ ಬರ್ಬರ ಹತ್ಯೆ: ಪತ್ನಿಯ ಶೀಲ ಶಂಕಿಸಿ ಪತ್ನಿಯನ್ನು ಪತಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ದೊಡ್ಡಸಣ್ಣೆ ಗ್ರಾಮದಲ್ಲಿ ನಡೆದಿದೆ. ಗಂಡ ಮುನಿ ಆಂಜೀನಪ್ಪ ಕಳೆದ ರಾತ್ರಿ ಹೆಂಡತಿಯ ಮೇಲೆ ಅನುಮಾನಗೊಂಡು ಪತ್ನಿಯೊಂದಿಗೆ ಗಲಾಟೆ ಮಾಡಿದ್ದಾನೆ.
ಗಲಾಟೆ ವಿಕೋಪಕ್ಕೆ ತಿರುಗಿ ಪತ್ನಿಯನ್ನು ಮನಬಂದಂತೆ ಹಲ್ಲೆ ಮಾಡಿ, ಬಟ್ಟೆ ಕತ್ತರಿಸುವ ಕತ್ತರಿಯಿಂದ ಇರಿದಿದ್ದಾನೆ. ಗಾಯಗೊಂಡಿದ್ದ ಮಹಿಳೆ ತೀವ್ರ ರಕ್ತಸಾವ್ರಕ್ಕೆ ಒಳಗಾಗಿದ್ದು, ಆಸ್ವತ್ರೆಗೆ ಸಾಗಿಸುವ ಮಾರ್ಗ ಮದ್ಯೆ ಸಾವನ್ನಪ್ಪಿದ್ದಾಳೆ. ಈ ಸಂಬಂಧ ಸ್ಥಳಕ್ಕೆ ದೇವನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೈದ ಗಂಡನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಬ್ಯಾಟರಿ ಚಾಲಿತ ವಾಹನಕ್ಕೆ ಬೆಂಕಿ: ಚಲಿಸುತ್ತಿದ್ದ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿರುವ ಘಟನೆ ಮೈಸೂರು ಅರಮನೆ ಬಳಿಯ ಮಾರಮ್ಮನ ದೇವಸ್ಥಾನದ ಎದುರು ಗುರುವಾರ ಸಂಜೆ ನಡೆದಿದೆ. ಅದೃಷ್ಟವಶಾತ್ ಸವಾರ ಮೈಸೂರಿನ ರಾಮಕೃಷ್ಣನಗರದ ನಿವಾಸಿ ಬಸವರಾಜು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇವರು ತಮ್ಮ ಸ್ನೇಹಿತರಿಗೆ ಸೇರಿದ ಎಲೆಕ್ಟ್ರಿಕ್ಸ್ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ ಸ್ಕೂಟರ್‌ನ ಹಿಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಸಾರ್ವಜನಿಕರು, ಬಸವರಾಜು ಅವರನ್ನು ಎಚ್ಚರಿಸಿದ್ದಾರೆ.
ತಕ್ಷಣ ಬಸವರಾಜು ಕೆಳಗಿಳಿದು, ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಆದರೂ, ಎಲೆಕ್ಟ್ರಿಕ್ಸ್ ಸ್ಕೂಟರ್ ಸಂಪೂರ್ಣ ಭಸ್ಮವಾಗಿದೆ. ಸ್ಥಳಕ್ಕೆ ನಗರ ಸಂಚಾರ ಉಪ ವಿಭಾಗದ ಎಸಿಪಿ ಪರಶುರಾಮಪ್ಪ ಅವರು ಭೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ ದೇವರಾಜ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಮಚ್ಚು ಬೀಸಿದ ಪ್ರಕರಣ: ಆರೋಪಿಗಳು ಅರೆಸ್ಟ್