ಮೈಸೂರು: ದಿನೇ ದಿನೆ ಕೊರೊನಾ ಹಾಗೂ ಒಮಿಕ್ರಾನ್ ಸೋಂಕು ಹೆಚ್ಚಾಗುತ್ತಿರುವುದರಿಂದ, ಕೋವಿಡ್ ವಾರಿಯರ್ಸ್‌ಆಗಿ ಮುಂಚೂಣಿಯಲ್ಲಿರುವ ಪೌರಕಾರ್ಮಿಕರಿಗೆ ಕೊರೊನಾ ಪರೀಕ್ಷೆ ಮಾಡಲಾಯಿತು.
ಶಾಲೆ ಮಕ್ಕಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ, ಓಂ ಶಕ್ತಿಗೆ ಹೋಗಿ ಬಂದಿದ್ದ ಭಕ್ತರಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿರುವುದರಿಂದ ಹಾಗೂ ಮೈಸೂರಿನಲ್ಲಿ ಎರಡು ದಿನಗಳಿಂದ ಕೊರೊನಾ ಸೋಂಕು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆ ನಗರಾದ್ಯಂತ ಸ್ವಚ್ಛತೆ ಮಾಡುತ್ತಿರುವ ಪೌರಕಾರ್ಮಿಕರಿಗೆ ಸಾಮೂಹಿಕವಾಗಿ ಹರಡದಂತೆ ಎಚ್ಚರಿಕೆ ವಹಿಸಬೇಕು ಎಂಬ ಉದ್ದೇಶದಿಂದ ನಗರ ಪಾಲಿಕೆ ಪೌರಕಾರ್ಮಿಕರಿಗೆ ಕೋವಿಡ್ ಪರೀಕ್ಷೆ ನಡೆಸಲಾಯಿತು.
ನಗರದಲ್ಲಿ ಸೋಮವಾರದಿಂದ ಬೂಸ್ಟರ್ ಡೋಸ್ ನೀಡಲು ಸಿದ್ಧವಾದ ಜಿಲ್ಲಾಡಳಿತವು, ಭಾನುವಾರ ಪೂರ್ವಭಾವಿಯಾಗಿ ನಗರದ ವಲಯ ಕಚೇರಿಗಳಲ್ಲಿ ಪೌರಕಾರ್ಮಿಕರಿಗೆ ಕೋವಿಡ್ ಪರೀಕ್ಷೆ ನಡೆಸಿದೆ. ನಗರದಾದ್ಯಂತ ಕೋವಿಡ್ ಪ್ರಕರಣ ಹೆಚ್ಚಳವಾಗುತ್ತಿರುವುದರಿಂದ, ಪೌರಕಾರ್ಮಿಕರ ಸುರಕ್ಷತೆಯಿಂದ ಸ್ವಚ್ಛತೆಗೆ ಅನಾನುಕೂಲ ಉಂಟಾಗದೇ ಇರಲಿ ಎಂಬ ಉದ್ದೇಶದಿಂದ ಭಾನುವಾರ ಸುಮಾರು 100ಕ್ಕೂ ಹೆಚ್ಚು ಪೌರಕಾರ್ಮಿಕರಿಗೆ ಭಾನುವಾರ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಲಾಯಿತು.
ಜಿಲ್ಲಾಡಳಿತವು ನಗರದೆಲ್ಲೆಡೆ ಸುಮಾರು 25,237 ಮುಂಚೂಣಿ ಕಾರ್ಯಕರ್ತರನ್ನು ಗುರುತಿಸಿದೆ. ಸೋಮವಾರ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಬೂಸ್ಟರ್ ಡೋಸ್ ಲಸಿಕಾಕರಣ ಮಾಡಲಿದೆ. ಎಲ್ಲರಿಗೂ ಹಂತಹಂತವಾಗಿ ಲಸಿಕೆ ಹಾಕಲಾಗುವುದು. ಎರಡು ಡೋಸ್ ಪಡೆದು ಒಂಬತ್ತು ತಿಂಗಳಾಗಿರುವ ಕಾರ್ಯಕರ್ತರಿಗೆ ಮೊದಲ ಪ್ರಾಶಸ್ತ್ಯ ನೀಡಲು ಜಿಲ್ಲಾಡಳಿತ ಮುಂದಾಗಿದೆ.
ಕೊರೊನಾ ಸೋಂಕು ಹೆಚ್ಚಾಗುತ್ತಿರುವುದರಿಂದ ಪೌರಕಾರ್ಮಿಕರನ್ನು ಆಸ್ಪತ್ರೆ ಹಾಗೂ ಇತರೆ ಸ್ಥಳಗಳ ಸ್ವಚ್ಛತೆಗೆ ಅವರನ್ನು ಹೇಗೆ ಬಳಸಿಕೊಳ್ಳಬೇಕು. ಅವರಿಗೆ ನೀಡಬೇಕಾದ ಸೌಲಭ್ಯದ ಬಗ್ಗೆ ಚರ್ಚೆ ನಡೆಸಲಾಗಿದೆ.
ಮಾರ್ಗಸೂಚಿ ಧಿಕ್ಕರಿಸಿದವರಿಗೆ ದಂಡ: ರಾಜ್ಯ ಸರ್ಕಾರ ವಿಧಿಸಿರುವ ವಾರಾಂತ್ಯ ಕರ್ಫ್ಯೂವಿನಲ್ಲಿ ಕೋವಿಡ್ ಮಾರ್ಗಸೂಚಿ ಧಿಕ್ಕರಿಸಿದವರಿಗೆ ಪೊಲೀಸರು ದಂಡ ವಿಧಿಸಿದರು. ಮಾಸ್ಕ್ ಧರಿಸದೇ ಬೇಕಾಬಿಟ್ಟಿಯಾಗಿ ರಸ್ತೆಯಲ್ಲಿ ಓಡಾಡುತ್ತಿದ್ದ ಸಾರ್ವಜನಿಕರು, ವಾಹನ ಸವಾರರಿಗೆ ದಂಡ ಹಾಕಿ, ಪೊಲೀಸರು ಬಿಸಿ ಮುಟ್ಟಿಸಿದರು.
ನಗರದ ಕೆ.ಆರ್.ವೃತ್ತ, ನಂಜುಮಳಿಗೆ, ಚಾಮರಾಜವೃತ್ತ ಸೇರಿದಂತೆ ಹಲವಡೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಮಾಸ್ಕ್ ಧರಿಸದೇ ಮನಬಂದಂತೆ ಅಡ್ಡಾಡುತ್ತಿದ್ದವರಿಗೆ ದಂಡ ವಿಧಿಸಿದರು. ಮಾಸ್ಕ್ ಧರಿಸದೇ ವಾಹನಗಳಲ್ಲಿ ಸಾಗುತ್ತಿದ್ದ ಸವಾರರನ್ನು ಅಡ್ಡಗಟ್ಟಿ, ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಸೂಚನೆ ನೀಡಿದ ಪೊಲೀಸರು, ಸರ್ಕಾರದ ನಿಯಮ ಪಾಲಿಸದೇ ಇದ್ದವರಿಗೆ 250 ರೂ.ದಂಡ ವಿಧಿಸಿದ್ದಾರೆ.