ಮೈಸೂರು: ಕೊರೊನಾ ಹೊಡೆತಕ್ಕೆ ತಂಬಾಕು ಬೆಳೆಗಾರರೂ ತತ್ತರಿಸಿದ್ದಾರೆ. ತಂಬಾಕು ಬೆಳೆಯನ್ನೇ ಅವಲಂಬಿತರಾಗಿದ್ದ ಬೆಳೆಗಾರರು, ಇದೀಗ ಹೆಚ್ಚುವರಿ ತಂಬಾಕು ಬೆಳೆಯಲು ಭಯಪಡುವ ಪರಿಸ್ಥಿತಿಯಿದೆ.
ದೇಶ ಹಾಗೂ ವಿದೇಶಗಳಿಗೆ ರಫ್ತು ಮಾಡುವ ಉತ್ತಮ ದರ್ಜೆಯ ತಂಬಾಕು ಬೆಳೆಯುವ ರಾಜ್ಯ ಕರ್ನಾಟಕ. ಅದರಲ್ಲಿ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಎಚ್.ಡಿ.ಕೋಟೆ, ಹುಣಸೂರು, ಕೆ.ಆರ್.ನಗರದ ಕೆಲವು ಭಾಗಗಳ ಜೊತೆಗೆ ಹಾಸನ ಜಿಲ್ಲೆಯ ರಾಮನಾಥಪುರದ ರೈತರು ಹೆಚ್ಚು ತಂಬಾಕು ಬೆಳೆ ಬೆಳೆಯುತ್ತಾರೆ. ಈ ಭಾಗದಲ್ಲಿ ಸುಮಾರು 45,000 ತಂಬಾಕು ಬೆಳೆಗಾರರಿದ್ದು, ಪ್ರತೀ ವರ್ಷ 100 ಮಿಲಿಯನ್ ಕೆ.ಜಿಯಷ್ಟು ತಂಬಾಕು ಬೆಳೆಯುವ ಸಾಮರ್ಥ್ಯ ಹೊಂದಿದ್ದಾರೆ.
ಈ ವರ್ಷ ಪ್ರಪಂಚದಾದ್ಯಂತ ಉಂಟಾಗಿರುವ ಕೊರೊನಾ ಎಂಬ ರೋಗ, ತಂಬಾಕು ಬೆಳೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಬೆಳೆದ ತಂಬಾಕು ಬೆಳೆಯನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಅದಲ್ಲದೇ, ಈ ತಂಬಾಕುಗಳನ್ನು ಖರೀದಿ ಮಾಡಲು ವಿದೇಶಿ ಹರಾಜುದಾರರೂ ಬರುತ್ತಿಲ್ಲ. ಈ ವರ್ಷ 99 ಮಿಲಿಯನ್ ಕೆ.ಜಿ ತಂಬಾಕು ಬೆಳೆ ಬೆಳೆಯಲು ತಂಬಾಕು ಮಂಡಳಿ ಅನುಮತಿ ನೀಡಿತ್ತು, ಆದರೆ ಕೊರೊನಾ ಸೃಷ್ಟಿಸಿದ ಎಡವಟ್ಟಿನಿಂದಾಗಿ ಮೈಸೂರು ಜಿಲ್ಲೆಯ ತಂಬಾಕು ಬೆಳೆಯುವ ಪ್ರದೇಶಗಳಲ್ಲಿ 88 ಮಿಲಿಯನ್ ಕೆ.ಜಿ ಮಾತ್ರ ಬೆಳೆಯಲು ಅವಕಾಶ ನೀಡಿದೆ.
ಹೆಚ್ಚುವರಿ ತಂಬಾಕು ಬೆಳೆದರೆ ಬೀಳುತ್ತೆ ದಂಡ:
ತಂಬಾಕು ಬೆಳೆಯನ್ನು ಆಂಧ್ರ ಮತ್ತು ಕರ್ನಾಟಕದಲ್ಲಿ ಮಾತ್ರ ಬೆಳೆಯಲಾಗುತ್ತದೆ. ತಂಬಾಕು ಮಂಡಳಿಯು ಆಂಧ್ರಪ್ರದೇಶದ ಗುಂಟೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರತೀ ವರ್ಷ ಎಷ್ಟು ತಂಬಾಕು ಉತ್ಪಾದನೆ ಮಾಡಬೇಕು ಎಂಬುದನ್ನು ತೀರ್ಮಾನಿಸಲು ವರ್ಷಕ್ಕೊಮ್ಮೆ ಸಭೆ ಸೇರಿ, ಆಂಧ್ರದಲ್ಲಿ ಎಷ್ಟು ಮಿಲಿಯನ್ ತಂಬಾಕು ಬೆಳೆಯಬೇಕು? ಕರ್ನಾಟಕದಲ್ಲಿ ತಂಬಾಕು ಬೆಳೆಯನ್ನು ಎಷ್ಟು ಮಿಲಿಯನ್ ಬೆಳೆಯಬೇಕು ? ಎಂಬುದನ್ನು ತೀರ್ಮಾನ ಮಾಡುತ್ತದೆ. ಅದರಂತೆ ಹರಾಜು ಸಂದರ್ಭದಲ್ಲಿಯೂ ಸಹ ತಂಬಾಕು ಬೆಳೆಗಾರರ ಲೈಸನ್ಸ್ ಅನ್ನು ಪರಿಶೀಲಿಸಿ ಎಷ್ಟು ಕೆ.ಜಿ ಬೆಳೆಯಲಾಗಿದೆ ಎಂಬುದನ್ನು ತೀರ್ಮಾನ ಮಾಡುತ್ತದೆ. ಒಂದು ವೇಳೆ ಹೆಚ್ಚುವರಿಯಾಗಿ ತಂಬಾಕು ಬೆಳೆದರೆ ಅದಕ್ಕೆ ದಂಡ ವಿಧಿಸಿ ಹರಾಜು ಪ್ರಕ್ರಿಯೆ ನಡೆಸುತ್ತಾರೆ. ಈಗಾಗಲೇ ಆಂಧ್ರದ ಮಾರುಕಟ್ಟೆಯಲ್ಲಿ ತಂಬಾಕು ಹರಾಜಿಗೆ ಗೆಜೆಟ್ ನೋಟಿಫಿಕೇಶನ್ ಹೊರಡಿಸಲಾಗಿದ್ದು, ಹೆಚ್ಚುವರಿ ತಂಬಾಕು ಬೆಳೆಗೆ ವಿಧಿಸಿದ್ದ ದಂಡ ಕಡಿಮೆ ಮಾಡುವಂತೆ ಅಲ್ಲಿನ ರೈತರು ಮನವಿ ಮಾಡಿದ್ದಾರೆ.
ಕರ್ನಾಟಕದಲ್ಲಿ ತಂಬಾಕು ಹರಾಜು ಯಾವಾಗಲೂ ಸೆಪ್ಟೆಂಬರ್ ಮೂರನೇ ವಾರದಿಂದ ಆರಂಭವಾಗಿ ಮಾರ್ಚ್ ತಿಂಗಳವರೆಗೆ ನಡೆಯುತ್ತದೆ. ಕಳೆದ ವರ್ಷ ಕರ್ನಾಟಕಕ್ಕೆ 100 ಬಿಲಿಯನ್ ಕೆ.ಜಿ ತಂಬಾಕು ಬೆಳೆ ಬೆಳೆಯಲು ತಂಬಾಕು ಮಂಡಳಿ ಅನುಮತಿ ನೀಡಿತ್ತು. ಆದರೆ 106 ಬಿಲಿಯನ್ ಕೆ.ಜಿ ಬೆಳೆ ಬೆಳೆಯಲಾಗಿತ್ತು. ಹೆಚ್ಚುವರಿಯಾಗಿ 6 ಬಿಲಿಯನ್ ಕೆ.ಜಿ ತಂಬಾಕು ಬೆಳೆದ ರೈತರಿಗೆ ದಂಡ ವಿಧಿಸಿ ತಂಬಾಕು ಖರೀದಿಸಲಾಯಿತು. ಆದರೆ ಈ ವರ್ಷ ತಂಬಾಕು ಬೆಳೆ ಬೆಳೆಯಲು ಬೆಳೆಗಾರರು ಹಿಂದೇಟು ಹಾಕಿದ್ದಾರೆ, ಏಕೆಂದರೆ ಇಲ್ಲಿ ಬೆಳೆಯುವ ಉತ್ತಮ ದರ್ಜೆಯ ತಂಬಾಕು ಖರೀದಿಗೆ ವಿದೇಶದಿಂದ ಕೊಂಡುಕೊಳ್ಳುವವರು ಬರಬೇಕು, ಆದರೆ ಇಂತಹ ಸಂದರ್ಭದಲ್ಲಿ ವಿದೇಶದಿಂದ ಬರುವುದು ಅನುಮಾನ. ಆದ್ದರಿಂದ ಈ ಬಾರಿ ತಂಬಾಕು ಬೆಳೆಗೆ ಕೊರೊನಾ ಎಫೆಕ್ಟ್‌ನಿಂದ ಇಳುವರಿ ಕಡಿಮೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ರಾಜ್ಯ ತಂಬಾಕು ಬೆಳೆಗಾರರ ಅಧ್ಯಕ್ಷ ಜವರೇಗೌಡ.
ತಂಬಾಕು ಹರಾಜು ಕೇಂದ್ರಗಳು:
ಕರ್ನಾಟಕದಲ್ಲಿ ಬೆಳೆದ ತಂಬಾಕು ಬೆಳೆಯನ್ನು ಚಿಲ್ಕುಂದ, ಕಂಪಲಪುರ, ಕಟ್ಟೆಮಡವಲವಾಡಿ, ಕಲ್ಕುಂಡಿ, ಎಚ್.ಡಿ.ಕೋಟೆ ಹಾಗೂ ರಾಮನಾಥಪುರ ತಂಬಾಕು ಹರಾಜು ಕೇಂದ್ರಗಳಲ್ಲಿ ರೈತರು ಮಾರಾಟ ಮಾಡುತ್ತಾರೆ. ಇಲ್ಲಿ ಹರಾಜು ಪ್ರಕ್ರಿಯೆ ಪ್ರತಿ ವರ್ಷ ಸೆಪ್ಟೆಂಬರ್ನಲ್ಲಿ ಆರಂಭವಾಗಿ ಮಾರ್ಚ್ ಅಂತ್ಯದೊಳಗೆ ಮುಗಿಯುತ್ತದೆ.