ಮೈಸೂರು: ಹಿಂದಿನ ಒಪ್ಪಂದದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಮೈತ್ರಿ ಮುಂದುವರೆದಿದ್ದು, ಈ ಬಾರಿ ಜೆಡಿಎಸ್ಗೆ ಮೇಯರ್ ಸ್ಥಾನ, ಕಾಂಗ್ರೆಸ್ಗೆ ಉಪ ಮೇಯರ್ ಸ್ಥಾನ ಎಂದು ಶಾಸಕ ಸಾ.ರಾ.ಮಹೇಶ್ ನೇತೃತ್ವದಲ್ಲಿ ನಡೆದ ಎರಡು ಪಕ್ಷಗಳ ಸಭೆಯಲ್ಲಿ ತೀರ್ಮಾನಿಸಲಾಗಿದೆ.
![Congress and JDS alliance](https://etvbharatimages.akamaized.net/etvbharat/prod-images/kn-mys-1-mayor-seat-announce-news-7208002_09012020085324_0901f_1578540204_317.jpg)
ಜೊತೆಗೆ ಸ್ಥಾಯಿ ಸಮಿತಿಗಳ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಹಾಗೂ ಕಾಂಗ್ರೆಸ್ ನಗರಾದ್ಯಕ್ಷ ಆರ್.ಮೂರ್ತಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಿಂದಿನ ಒಪ್ಪಂದದಂತೆ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಮೈತ್ರಿ ಮುಂದುವರಿಸಿಕೊಂಡು ಹೋಗಲು ತೀರ್ಮಾನಿಸಲಾಯಿತು.
ಮೈತ್ರಿಯಂತೆ ಜೆಡಿಎಸ್ಗೆ ಮೇಯರ್ ಸ್ಥಾನ, ಕಾಂಗ್ರೆಸ್ಗೆ ಉಪ ಮೇಯರ್ ಸ್ಥಾನ ನೀಡಲು ಮುಖಂಡರು ಒಮ್ಮತದ ತೀರ್ಮಾನಕ್ಕೆ ಬಂದಿದ್ದಾರೆ. ಈ ಒಪ್ಪಂದ ವಿಚಾರವನ್ನು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿ ಅವರಿಗೆ ತಿಳಿಸಲಾಗಿದೆ. ಜೊತೆಗೆ ಕೆಪಿಸಿಸಿ ವರಿಷ್ಠರು ಹಾಗೂ ಸಿದ್ದರಾಮಯ್ಯನವರಿಗೂ ಈ ವಿಚಾರ ತಿಳಿಸಿದ್ದು, ಕೆಪಿಸಿಸಿ ವೀಕ್ಷಕರಾಗಿ ಕೃಷ್ಣಭೈರೇಗೌಡ ಮುಂದಿನ ವಾರ ಮೈಸೂರಿಗೆ ಬಂದು ಕಾಂಗ್ರೆಸ್ ಪಾಲಿಕೆ ಸದಸ್ಯರ ಸಭೆ ನಡೆಸಲಿದ್ದಾರೆ. ಉಪ ಮೇಯರ್ ಅಭ್ಯರ್ಥಿಯನ್ನೂ ಆಯ್ಕೆ ಮಾಡಲಿದ್ದಾರೆ ಎನ್ನಲಾಗಿದೆ. ಇನ್ನು ಜೆಡಿಎಸ್ ಮೇಯರ್ ಅಭ್ಯರ್ಥಿಯನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಯ್ಕೆ ಮಾಡಲಿದ್ದಾರೆ ಎಂದು ಮೂಲಗಳು ಖಚಿತ ಪಡಿಸಿವೆ. ಈ ನಡುವೆ ಮೇಯರ್ ಚುನಾವಣೆ ಪ್ರಕ್ರಿಯೆಯಿಂದಲೂ ತಟಸ್ಥರಾಗಿರುವ ಶಾಸಕ ಜಿ.ಟಿ.ದೇವೇಗೌಡರವರ ನಡೆ ನಿಗೂಢವಾಗಿದೆ.