ಮೈಸೂರು: ಇತ್ತೀಚಿಗೆ ಮೃತಪಟ್ಟ ಪೌರ ಕಾರ್ಮಿಕರ ಕುಟುಂಬಕ್ಕೆ ಮಹಾನಗರ ಪಾಲಿಕೆಯಿಂದ 5 ಲಕ್ಷ ರೂ. ನೆರವು ನೀಡಲು ಮೇಯರ್ ತಸ್ನೀಂ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಕರ್ತವ್ಯನಿರತ ಗುತ್ತಿಗೆ ನೌಕರ ಸುರೇಶ್ ನಿಧನ ಹಿನ್ನೆಲೆಯಲ್ಲಿ ಕುಟುಂಬಕ್ಕೆ 5 ಲಕ್ಷ ನೆರವು ನೀಡಬೇಕೆಂಬ ಸದಸ್ಯರ ಮನವಿಗೆ ಒಪ್ಪಿಗೆ ಸೂಚಿಸಿ ಅನುಮೋದನೆ ನೀಡಲಾಯಿತು. ಅಲ್ಲದೆ ಇಎಸ್‍ಐ, ಪಿಎಫ್ ಹಣವನ್ನು ಕೊಡಿಸಿಕೊಡುವುದಾಗಿ ಮಹಾಪೌರರು ತಿಳಿಸಿದರು. ತೆರಿಗೆ ನಿರ್ಧರಣೆ ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ನಡವಳಿ ಹಾಗೂ ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ನಡವಳಿಯನ್ನು ಸಭೆಯಲ್ಲಿ ದಾಖಲಿಸಿ ಅನುಮೋದನೆ ನೀಡಲಾಯಿತು.
ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ ನಡವಳಿ ಮಂಡಿಸಿದ ವೇಳೆ ಕೆಲ ಸದಸ್ಯರು ಕೆಲವು ಖಾಸಗಿ ಕಟ್ಟಡಗಳಿಗೆ ಅಕ್ರಮವಾಗಿ ಅನುಮತಿ ನೀಡುತ್ತಿರುವ ಬಗ್ಗೆ ಗಮನಕ್ಕೆ ತಂದರು. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ವರ್ಕ್ ಸಮಿತಿ ಹಾಗೂ ಮಹಾಪೌರರು ಸ್ಥಳ ಪರಿಶೀಲನೆ ನಡೆಸಿ ಮುಂದಿನ ಸಭೆಗೆ ತೆಗೆದುಕೊಳ್ಳುವುದಾಗಿ ಮೇಯರ್ ತಸ್ನೀಂ ಹೇಳಿ ಚರ್ಚೆ ಅಂತ್ಯಗೊಳಿಸಿದರು. ಪೌರಕಾರ್ಮಿಕರ ಬೆಳಗಿನ ಉಪಹಾರಕ್ಕೆ 5.40 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ. ಉಪಹಾರದ ಭತ್ಯೆಯಾಗಿ ಕಾಯಂ ಪೌರಕಾರ್ಮಿಕರಿಗೆ ನೇರವಾಗಿ ಅವರ ಖಾತೆಗೆ ಜಮೆ ಮಾಡಲಾಗುವುದು. ಹೊರಗುತ್ತಿಗೆ ಪೌರಕಾರ್ಮಿಕರಿಗೆ ಗುತ್ತಿಗೆದಾರರ ಮೂಲಕ ಉಪಹಾರ ಭತ್ಯೆ ನೀಡಲು ಸದಸ್ಯರ ಒಪ್ಪಿಗೆಯಂತೆ ತೀರ್ಮಾನಿಸಲಾಯಿತು. ಸಭೆಯಲ್ಲಿ ಉಪಮಹಾಪೌರರಾದ ಶ್ರೀಧರ್, ಹೆಚ್ಚುವರಿ ಆಯುಕ್ತ ಶಶಿಕುಮಾರ್ ಇತರರು ಸಭೆಯಲ್ಲಿ ಹಾಜರಿದ್ದರು.