ಮೈಸೂರು: ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಈಗ ಬರುತ್ತಿರುವ ಹೆಸರುಗಳ ವಿಚಾರದಲ್ಲಿ ಯಾವುದೇ ಸತ್ಯಾಂಶವಿಲ್ಲ. ಪಕ್ಷದ ಮುಖಂಡರ ಜೊತೆ ಚರ್ಚಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು.
ದಸರಾ ಉದ್ಘಾಟಕರಾದ ಎಸ್.ಎಲ್. ಭೈರಪ್ಪ ಅವರ ಮನೆಗೆ ಆಗಮಿಸಿ, ಅವರಿಗೆ ಸನ್ಮಾನ ಮಾಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿ, ಔರಾಧ್ಕರ್ ವರದಿಯನ್ನು ನಾಲ್ಕೈದು ದಿನಗಳಲ್ಲಿ ಜಾರಿ ಮಾಡಲು ಪ್ರಯತ್ನಿಸುತ್ತೇವೆ. ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಹಲವಾರು ಹೆಸರುಗಳು ಮಾಧ್ಯಮಗಳಲ್ಲಿ ಬರುತ್ತಿವೆ. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸ್ಪಷ್ಟನೆ ನೀಡಿದರು.
ಚುನಾವಣಾ ದಿನಾಂಕ ನಿಶ್ಚಯವಾಗಿದೆ. ಗೆಲುವಿಗಾಗಿ ಹಾಗೂ ಯಾರ್ಯಾರಿಗೆ ಟಿಕೆಟ್ ಕೊಡಬೇಕು ಎಂಬ ಬಗ್ಗೆ ಪಕ್ಷದ ಅಧ್ಯಕ್ಷರು ಹಾಗೂ ಮುಖಂಡರ ಜೊತೆ ಕುಳಿತು ಚರ್ಚೆ ಮಾಡುತ್ತೇನೆ. ಉಪ ಚುನಾವಣೆ ವೇಳಾಪಟ್ಟಿ ಪ್ರಕಟದ ಬಗ್ಗೆ ಸಿದ್ದರಾಮಯ್ಯ ಏನು ಬೇಕಾದರೂ ಹೇಳಲಿ ಚುನಾವಣಾ ಆಯೋಗ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದೆ. ಇದನ್ನು ದೇಶದ ಜನ ಸ್ವಾಗತಿಸಿದ್ದಾರೆ ಎಂದರು.
ದಸರಾವನ್ನು ಅದ್ಧೂರಿಯಾಗಿ ಆಚರಿಸೋಣ, ಇಲ್ಲಿನ ದೀಪಾಲಂಕಾರ, ದಸರಾ ಸಿದ್ಧತೆ ಎಲ್ಲವೂ ಚೆನ್ನಾಗಿದೆ. ಎಸ್.ಎಲ್.ಭೈರಪ್ಪ ಅವರು ಕನ್ನಡ ಉಳಿವಿಗಾಗಿ ಕೆಲವು ಸಲಹೆ ನೀಡಿದ್ದಾರೆ ಎಂದುಇದೇ ಸಂದರ್ಭದಲ್ಲಿ ಹೇಳಿದರು.